ಕಲಬುರಗಿಯ ಕೋರಿಮಠದಲ್ಲಿ ಆ.12ರಿಂದ ಶ್ರಾವಣ ಮಾಸದ ಮಹಾಪುರಾಣ
ಆ.11ರಂದು ಲಿಂಗಬೀರದೇವರಿಂದ ಪಾದಯಾತ್ರೆ; ಸೆ.11ರವರೆಗೆ ಪ್ರತಿದಿನ ಸಂಜೆ 7ಕ್ಕೆ ಧಾರ್ಮಿಕ ಪ್ರವಚನ

ಕಲಬುರಗಿ, ಆ.10: ನಗರದ ಬ್ರಹ್ಮಪುರ ಬಡಾವಣೆಯ ಧನಗರಗಲ್ಲಿಯ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ರೇವಣಸಿದ್ದೇಶ್ವರ ಕೋರಿಮಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಲುಮತ ಧರ್ಮದ ಸದ್ಗುರು ಏಳುಕೋಟಿ ಯಲ್ಲಾಲಿಂಗ ಮಹಾರಾಜರ ಮಹಾಪುರಾಣ ಕಾರ್ಯಕ್ರಮವು ಆಗಸ್ಟ್ 12ರಿಂದ ಸೆಪ್ಟೆಂಬರ್ 11ರವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ನಡೆಯಲಿದೆ ಎಂದು ಶ್ರೀ ರೇವಣಸಿದ್ದೇಶ್ವರ ಕೋರಿಮಠ ತರುಣ ಸಂಘ ಹಾಗೂ ವಿದ್ಯಾವರ್ಧಕ ಸಂಘದ ಅಧ್ಯಕ್ಷ ರವಿಗೊಂಡ ಬಿ. ಕಟ್ಟಿಮನಿ ಮತ್ತು ಪ್ರಧಾನ ಕಾರ್ಯದರ್ಶಿ ರಜನಿಕಾಂತ್ ಎಸ್. ಮೇಳಕುಂದಿ ತಿಳಿಸಿದ್ದಾರೆ.
ಮಹಾಪುರಾಣದ ಅಂಗವಾಗಿ ಆಗಸ್ಟ್ 11ರಂದು ಬೆಳಿಗ್ಗೆ 7.30ಕ್ಕೆ ತಿಂಥಣಿ ಬ್ರಿಜ್‌ನ ದಾಸೋಹ ಮೂರ್ತಿ ಕನಕ ಗುರುಪೀಠದ ಲಿಂಗದೇವರು ಪಾದಯಾತ್ರೆ ನಡೆಸಲಿದ್ದಾರೆ. ಕೋರಿಮಠದ ಸಮೀಪದ ಸಮತಾ ಕಾಲೋನಿಯಿಂದ ಆರಂಭವಾಗುವ ಪಾದಯಾತ್ರೆಯು ಕನಕನಗರ ಹಾಗೂ ಶಾಂತವೀರನಗರದ ಮೂಲಕ ಸಾಗಲಿದ್ದು, ಬಳಿಕ ಕೋರಿಮಠ ತಲುಪಲಿದೆ.
ಆಗಸ್ಟ್ 12ರಂದು ಸಂಜೆ 7ಕ್ಕೆ ಮಹಾಪುರಾಣ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಉದ್ಘಾಟಿಸುವರು. ಲಿಂಗಬೀರದೇವರು ದಿವ್ಯ ಸಾನಿಧ್ಯ ವಹಿಸಲಿದ್ದು, ಅಗತಿರ್ಥ ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮೀಜಿ ಪಾವನ ಸಾನಿಧ್ಯ ವಹಿಸುವರು. ಕೆರೂಟಗಿ ಅಗತಿರ್ಥ ಶ್ರೀ ಬೀರಲಿಂಗೇಶ್ವರ ಸಿದ್ದಾಶ್ರಮದ ಮಾಳಿಗರಾಯ ದೇವರು ಪ್ರವಚನ ನೀಡಲಿದ್ದಾರೆ. ಆಕಾಶವಾಣಿ ಕಲಾವಿದ ಮಹೇಶ್ ಬಂಡನೂರು ಸಂಗೀತ ಹಾಗೂ ಕಲಾವಿದ ಸಿದ್ದಲಿಂಗಯ್ಯ ಸಾಲಿಮಠ ತಬಲಾ ಸಾಥ್ ನೀಡಲಿದ್ದಾರೆ.
ಕುರುಬಗೊಂಡ ಸಂಘದ ಜಿಲ್ಲಾಧ್ಯಕ್ಷ ಗುರುನಾಥ ತಂದೆ ಶರಣಪ್ಪ ಪೂಜಾರಿ, ರವಿಗೊಂಡ ತಂದೆ ಭೀಮಶಾ ಕಟ್ಟಿಮನಿ, ಕಾಳಪ್ಪ ತಂದೆ ನಿಂಗಪ್ಪ ತೆಗನೂರ್ ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಒಂದು ತಿಂಗಳ ಕಾಲ ನಡೆಯುವ ಮಹಾಪುರಾಣ ಕಾರ್ಯಕ್ರಮದಲ್ಲಿ ಕವಲಗಾದ ಬೀರಣ್ಣ ಮುತ್ಯಾ, ಅಣಜಗಿಯ ಸತ್ಯಾನಂದ ಶ್ರೀಗಳು, ಗೋಳಸಾರದ ಅಭಿನವ ಪುಂಡಲೀಕ್ ಮಹಾರಾಜರು, ಹಿರೇಸಾವಳಗಿಯ ಗುರುನಾಥ ಮಹಾಸ್ವಾಮೀಜಿ, ಚೌದಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯರು, ಖಾನಾಪುರದ ಮಲ್ಲಿಕಾರ್ಜುನ ಮುತ್ಯಾ, ಮಾಡಿಯಾಳದ ಪ್ರಭುರಾಯ ರೇವಪ್ಪ ಶ್ರೀಗಳು, ಬಸವಪಟ್ಟಣದ ಮರೆಪ್ಪ ಮುತ್ಯಾ, ಸೈದಾಪುರದ ಬೀರಲಿಂಗ ಮುತ್ಯಾ, ನಾಗಠಾಣದ ಮಾಳಿಂಗರಾಯ ಮಹಾರಾಜರು, ಮೇಳಕುಂದಾ (ಬಿ)ಯ ಮಹಾದೇವಪ್ಪ ಮುತ್ಯಾ ಒಡೆಯರ್, ಸರೂರು ಮಠದ ಶ್ರೀ ಶರಭಯ್ಯ ಮಹಾಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಹಾಗೂ ಪೂಜ್ಯರು ಆಗಮಿಸಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರು, ಧಾರ್ಮಿಕ ಮುಖಂಡರು ಹಾಗೂ ಸಮಾಜ ಸೇವಕರಿಗೆ ವಿಶೇಷ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ. ಧನಗರಗಲ್ಲಿಯ ನಿಂಗಪ್ಪ ತೆಗನೂರ್, ಕನಕನಗರದ ಭೂತಾಳಿ ತಳವಾಡ, ಯಲ್ಲಾಲಿಂಗ ಮುಡ್ಡಿ, ಬೀರಪ್ಪ, ಬನ್ನೆಪ್ಪ ಗುಡಿಮನಿ, ಮಲ್ಲಿಕಾರ್ಜುನ ಕಟ್ಟಿಮನಿ, ಮನೋಜಕುಮಾರ್ ಆಂದೋಲಾ, ಪ್ರೀತಿ, ಯಲ್ಲಾಲಿಂಗ, ಭವಾನಿ, ಭಾಗ್ಯ, ವೈಶಾಲಿ, ಶ್ವೇತಾ ಸೇರಿದಂತೆ ಹಲವು ಮಂದಿಯನ್ನು ಸನ್ಮಾನಿಸಲಾಗುವುದು.
ಸೆಪ್ಟೆಂಬರ್ 11ರಂದು ಮಹಾಪುರಾಣದ ಸಮಾರೋಪ ಸಮಾರಂಭ ನಡೆಯಲಿದ್ದು, ಸೆಪ್ಟೆಂಬರ್ 12ರಂದು ಖಾಂಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 8 ಗಂಟೆಗೆ ಪಲ್ಲಕ್ಕಿ ಮೆರವಣಿಗೆ ನಡೆಯಲಿದ್ದು, ಬಸವನಗರದ ಬೀರಲಿಂಗೇಶ್ವರ ದೇವಸ್ಥಾನ, ಸಮತಾ ಕಾಲೋನಿಯ ಮಾಳಿಂಗರಾಯ ದೇವಸ್ಥಾನ, ಶ್ರೀ ಜಗದಂಬಾದೇವಿ ದೇವಸ್ಥಾನ ಹಾಗೂ ಗುಂಡಲಿಂಗೇಶ್ವರ ದೇವಸ್ಥಾನದ ಮೂಲಕ ಕೋರಿಮಠ ತಲುಪಲಿದೆ.
ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳು, ಅಧಿಕಾರಿಗಳು, ಕವಿಗಳು, ಕಲಾವಿದರು, ಸಾಹಿತಿಗಳು, ಪತ್ರಕರ್ತರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಶ್ರೀ ರೇವಣಸಿದ್ದೇಶ್ವರರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ ಹಾಗೂ ಬೆಳಿಗ್ಗೆ 8 ಗಂಟೆಯಿಂದ ಪಲ್ಲಕ್ಕಿ ಉತ್ಸವ ನಡೆಯಲಿದೆ.
ಕೋರಿಮಠದ ಅಭಿವೃದ್ಧಿ: ಧನಗರಗಲ್ಲಿಯ ಶ್ರೀ ರೇವಣಸಿದ್ದೇಶ್ವರ ಕೋರಿಮಠದಲ್ಲಿ ಭವ್ಯ ಮಂದಿರ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಸುಮಾರು ₹50 ಲಕ್ಷ ವೆಚ್ಚದಲ್ಲಿ ಈಗಾಗಲೇ ಬುನಾದಿ ಹಾಕಲಾಗಿದ್ದು, ಕಟ್ಟಡ ನಿರ್ಮಾಣ ಕಾರ್ಯ ಮುಂದುವರಿದಿದೆ. ಶ್ರೀ ರೇವಣಸಿದ್ದೇಶ್ವರರ ಮೂರ್ತಿ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಸಲಾಗುತ್ತಿದೆ. ಕೋರಿಮಠದಲ್ಲಿ ಈಗಾಗಲೇ ಶಿಕ್ಷಣ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಮಹಾಪುರಾಣ ಹಾಗೂ ಶ್ರಾವಣ ಮಾಸದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ಸರ್ವರಿಗೂ ಭಂಡಾರದ ಸ್ವಾಗತವಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.



