ರಾಜಕೀಯ

ಸಚಿವ ಸಂಪುಟದಲ್ಲಿ ಬ್ರಾಹ್ಮಣ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು: ಗುರುರಾಜ ಕುಲಕರ್ಣಿ ಆಗ್ರಹ

ಸಚಿವ ಸ್ಥಾನ ಅಥವಾ ಉನ್ನತ ಹುದ್ದೆ ನೀಡುವ ಮೂಲಕ ಸಮಾನ ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ

ಕಲಬುರಗಿ, ಆ.5: ರಾಜ್ಯ ಸಚಿವ ಸಂಪುಟದಲ್ಲಿ ಬ್ರಾಹ್ಮಣ ಸಮಾಜದ ಯಾವುದೇ ಶಾಸಕರಿಗೆ ಸಚಿವ ಸ್ಥಾನ ದೊರೆಯದಿರುವುದು ಸಮಾಜದಲ್ಲಿ ನಿರಾಸೆ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ. ಆದ್ದರಿಂದ ಬ್ರಾಹ್ಮಣ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವಂತೆ ಸನಾತನ ಯುವಶಕ್ತಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗುರುರಾಜ ಕುಲಕರ್ಣಿ ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜಕೀಯದಲ್ಲಿ ಮತ ಕೇಳುವ ಸಂದರ್ಭದಲ್ಲಿ ಎಲ್ಲ ಸಮುದಾಯಗಳ ಬೆಂಬಲವನ್ನು ಪಡೆಯುವಂತೆ, ಅಧಿಕಾರ ಹಂಚಿಕೆಯಲ್ಲಿಯೂ ಎಲ್ಲಾ ವರ್ಗಗಳಿಗೂ ಸಮಾನ ಹಾಗೂ ನ್ಯಾಯಸಮ್ಮತ ಪ್ರಾತಿನಿಧ್ಯ ದೊರೆಯಬೇಕು ಎಂದು ಹೇಳಿದರು.

ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಬ್ರಾಹ್ಮಣ ಸಮುದಾಯದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ, ಸಮುದಾಯದ ಅರ್ಹ ಶಾಸಕರಿಗೆ ಸಚಿವ ಸಂಪುಟದಲ್ಲಿ ಅಥವಾ ಇತರೆ ಉನ್ನತ ಹುದ್ದೆಗಳಲ್ಲಿ ಅವಕಾಶ ಕಲ್ಪಿಸುವ ಬಗ್ಗೆ ಪಕ್ಷದ ನಾಯಕತ್ವ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ವಿಶೇಷವಾಗಿ ಬ್ರಾಹ್ಮಣ ಸಮುದಾಯದ ಅರ್ಹ ಶಾಸಕರಿಗೆ ಸಚಿವ ಸ್ಥಾನ ಅಥವಾ ಸೂಕ್ತ ಉನ್ನತ ಹುದ್ದೆ ನೀಡುವ ಮೂಲಕ ಎಲ್ಲ ಸಮುದಾಯಗಳಿಗೂ ಸಮಾನ ಗೌರವ ಹಾಗೂ ಅವಕಾಶ ನೀಡುವ ಸಂದೇಶವನ್ನು ಸರ್ಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ನಾಯಕತ್ವವು ಈ ಬೇಡಿಕೆಯನ್ನು ಸಕಾರಾತ್ಮಕವಾಗಿ ಪರಿಗಣಿಸಿ, ಬ್ರಾಹ್ಮಣ ಸಮಾಜದ ಭಾವನೆಗಳಿಗೆ ಸ್ಪಂದಿಸಬೇಕು ಎಂದು ಗುರುರಾಜ ಕುಲಕರ್ಣಿ ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button