ಆರೋಗ್ಯ

ಅಲರ್ಜಿ ಚಿಕಿತ್ಸೆಗೆ ನಿಖರ ತಪಾಸಣೆ ಅತ್ಯಗತ್ಯ: ಡಾ. ಗೌತಮ್ ಮೋದಿ

ರೋಗಿಯ ವೈದ್ಯಕೀಯ ಇತಿಹಾಸ ಮತ್ತು ಸೂಕ್ತ ಪರೀಕ್ಷೆಯಿಂದಲೇ ಪರಿಣಾಮಕಾರಿ ಚಿಕಿತ್ಸೆ ಸಾಧ್ಯ – ಜಿಮ್ಸ್‌ನಲ್ಲಿ ಬಹುಶಾಖಾ ವೈಜ್ಞಾನಿಕ ಕಾರ್ಯಾಗಾರ

ಕಲಬುರಗಿ, ಆ.7: ಶ್ವಾಸಕೋಶದ ಅಲರ್ಜಿ, ಆಸ್ತಮಾ ಸೇರಿದಂತೆ ವಿವಿಧ ಅಲರ್ಜಿ ಸಂಬಂಧಿತ ಕಾಯಿಲೆಗಳ ನಿಯಂತ್ರಣಕ್ಕೆ ಔಷಧ ಚಿಕಿತ್ಸೆ ಮಾತ್ರವಲ್ಲ, ರೋಗಿಯ ವೈದ್ಯಕೀಯ ಇತಿಹಾಸದ ಸಮಗ್ರ ಪರಿಶೀಲನೆ ಹಾಗೂ ನಿಖರ ಅಲರ್ಜಿ ಪರೀಕ್ಷೆ ಅತ್ಯಂತ ಮಹತ್ವದ್ದಾಗಿದೆ ಎಂದು ಎಫ್‌ಸಿಜಿಪಿ, ಎಫ್‌ಐಸಿಎಎಐ, ಎಂಎನ್‌ಸಿಸಿಪಿ(ಐ) ವೈದ್ಯ ತಜ್ಞ ಡಾ. ಗೌತಮ್ ಮೋದಿ ಹೇಳಿದರು.

ನಗರದ ಕಲಬುರಗಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್) ಆಸ್ಪತ್ರೆಯ 10ನೇ ಮಹಡಿಯ ಸಭಾಂಗಣದಲ್ಲಿ ಶುಕ್ರವಾರ ಜಿಮ್ಸ್‌ನ ಕಿವಿ, ಮೂಗು ಮತ್ತು ಗಂಟಲು (ENT) ವಿಭಾಗ ಹಾಗೂ ಶ್ವಾಸಕೋಶ ವೈದ್ಯಕೀಯ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ “Allergy & Immunology Across Specialities: A Multidisciplinary Approach” ವಿಷಯದ ಒಂದು ದಿನದ ಬಹುಶಾಖಾ ವೈಜ್ಞಾನಿಕ ಕಾರ್ಯಾಗಾರದಲ್ಲಿ ಅವರು ಉಪನ್ಯಾಸ ನೀಡಿದರು.

ರೋಗಿಯ ಆರೋಗ್ಯ ಇತಿಹಾಸವನ್ನು ವೈದ್ಯರು ಗಮನವಿಟ್ಟು ಆಲಿಸುವುದರಿಂದಲೇ ರೋಗನಿರ್ಣಯದ ಶೇ.80ರಷ್ಟು ಭಾಗ ಪೂರ್ಣಗೊಳ್ಳುತ್ತದೆ. ರೋಗಲಕ್ಷಣಗಳು ಯಾವಾಗ, ಹೇಗೆ ಆರಂಭವಾದವು ಎಂಬ ಮಾಹಿತಿಯು ನಿಖರ ಚಿಕಿತ್ಸೆಗೆ ದಾರಿ ತೋರಿಸುತ್ತದೆ. ಅಲರ್ಜಿ ಸಮಸ್ಯೆಗಳಿಂದ ಬಳಲುವವರಿಗೆ ಸರಿಯಾದ ಸಮಯದಲ್ಲಿ ಇಮ್ಯುನೊಥೆರಪಿ ಹಾಗೂ ಸೂಕ್ತ ಚಿಕಿತ್ಸೆ ನೀಡಿದರೆ ಕಾಯಿಲೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂದು ಅವರು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಔಷಧ ಅಲರ್ಜಿ ಸೇರಿದಂತೆ ವಿವಿಧ ರೀತಿಯ ಅಲರ್ಜಿಗಳ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಚಿಕಿತ್ಸೆ ಆರಂಭಿಸುವ ಮೊದಲು ರೋಗಿಯ ಹಿಂದಿನ ಆರೋಗ್ಯ ಸಮಸ್ಯೆಗಳು ಹಾಗೂ ಬಾಲ್ಯದ ಆಸ್ತಮಾ ಇತಿಹಾಸವನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಅಲರ್ಜಿನ್ ಪ್ರೊವೊಕೇಶನ್ ಟೆಸ್ಟ್ ಸೇರಿದಂತೆ ಆಧುನಿಕ ಪರೀಕ್ಷೆಗಳ ಮೂಲಕ ಅಲರ್ಜಿಗೆ ಕಾರಣವಾಗುವ ಅಂಶಗಳನ್ನು ನಿಖರವಾಗಿ ಪತ್ತೆಹಚ್ಚಿ, ಅದಕ್ಕೆ ತಕ್ಕ ಚಿಕಿತ್ಸೆಯನ್ನು ನೀಡಬಹುದು ಎಂದು ವಿವರಿಸಿದರು.

ಶ್ವಾಸಕೋಶ ಹಾಗೂ ಉಸಿರಾಟದ ಅಲರ್ಜಿಗಳನ್ನು ಪತ್ತೆಹಚ್ಚಲು ‘ಸ್ಕಿನ್ ಪ್ರಿಕ್ ಟೆಸ್ಟ್’ ಅತ್ಯಂತ ವಿಶ್ವಾಸಾರ್ಹ ಹಾಗೂ ‘ಗೋಲ್ಡ್ ಸ್ಟ್ಯಾಂಡರ್ಡ್’ ಪರೀಕ್ಷೆಯಾಗಿದೆ. ಆಹಾರ ಅಲರ್ಜಿ ಗುರುತಿಸಲು ‘ಪ್ರಿಕ್-ಟು-ಪ್ರಿಕ್’ ವಿಧಾನ ಪರಿಣಾಮಕಾರಿಯಾಗಿದ್ದು, ಕಾಂಪೊನೆಂಟ್ ರಿಸಾಲ್ವ್ಡ್ ಡಯಾಗ್ನೋಸಿಸ್ (CRD) ನಂತಹ ಆಧುನಿಕ ತಂತ್ರಜ್ಞಾನಗಳು ಅಲರ್ಜಿ ಉಂಟುಮಾಡುವ ಸೂಕ್ಷ್ಮ ಕಾರಣಗಳನ್ನು ಗುರುತಿಸಲು ನೆರವಾಗುತ್ತಿವೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಜಿಮ್ಸ್ ನಿರ್ದೇಶಕ ಡಾ. ಉಮೇಶ್ ಎಸ್.ಆರ್. ಸಸಿಗೆ ನೀರುಣಿಸುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.

ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗದ ವೈದ್ಯಕೀಯ ಅಧೀಕ್ಷಕರು ಹಾಗೂ ಮುಖ್ಯಸ್ಥರಾದ ಡಾ. ಶಿವಕುಮಾರ್ ಸಿ.ಆರ್. ಮಾತನಾಡಿ, ಮೂಗಿನ ಅಲರ್ಜಿ, ಸೈನಸೈಟಿಸ್, ಆಸ್ತಮಾ, ಚರ್ಮ, ಔಷಧ ಮತ್ತು ಆಹಾರ ಅಲರ್ಜಿ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಸಮಗ್ರ ಮಾಹಿತಿ ಹಾಗೂ ಆಧುನಿಕ ಚಿಕಿತ್ಸಾ ವಿಧಾನಗಳ ಬಗ್ಗೆ ಚರ್ಚೆ ನಡೆಯಲಿದ್ದು, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಜಿಮ್ಸ್ ಇಎನ್‌ಟಿ ವಿಭಾಗದ ಪ್ರಾಧ್ಯಾಪಕಿ ಹಾಗೂ ಮುಖ್ಯಸ್ಥೆ ಡಾ. ರೇಣುಕಾ ಎಸ್. ಮೇಳಕುಂದಿ ಮಾತನಾಡಿ, ಅಲರ್ಜಿ ಕೇವಲ ಒಂದು ಅಂಗಕ್ಕೆ ಸೀಮಿತವಾದ ಸಮಸ್ಯೆಯಲ್ಲ; ಅದು ಇಡೀ ದೇಹದ ಮೇಲೆ ಪರಿಣಾಮ ಬೀರುವ ವೈದ್ಯಕೀಯ ಸ್ಥಿತಿಯಾಗಿದೆ. ಆದ್ದರಿಂದ ವಿವಿಧ ವಿಭಾಗಗಳ ವೈದ್ಯರ ಸಹಭಾಗಿತ್ವದ ಬಹುಶಿಸ್ತೀಯ ಚಿಕಿತ್ಸಾ ವಿಧಾನ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.

ಜಿಮ್ಸ್ ಪಲ್ಮನರಿ ಮೆಡಿಸಿನ್ ವಿಭಾಗದ ಉಸ್ತುವಾರಿ ಮುಖ್ಯಸ್ಥೆ ಡಾ. ಎಸ್.ಎನ್. ಮಣಿದೇವಿ ಕರಂಪುಡಿ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾದ ಡಾ. ನರೇಂದ್ರ, ಡಾ. ರೇವಣಸಿದ್ದ, ಸ್ಥಳೀಯ ಉಪನ್ಯಾಸಕಿ ಡಾ. ಶ್ರದ್ಧಾ ಪವಾರ್, ಸಂಘಟನಾ ಸಮಿತಿ ಸದಸ್ಯರಾದ ಡಾ. ಸಿದ್ಧರಾಮ್ ಪಾಟೀಲ್, ಡಾ. ರಾಮಚಂದ್ರ ಜೋಶಿ, ಡಾ. ಅನಮ್ ರಿಹಾ, ಡಾ. ವಾಸಿಮ್ ಪಟೇಲ್, ಡಾ. ಆಕಾಶ್ ಅಣದೂರೆ, ಡಾ. ಆನಂದ್, ಡಾ. ಹರ್ಷ, ಡಾ. ಅಶ್ಬಾ ಮಹೇಂದ್ರಕರ್ ಸೇರಿದಂತೆ ಸ್ನಾತಕೋತ್ತರ ವಿದ್ಯಾರ್ಥಿಗಳು, ಇಂಟರ್ನ್‌ಗಳು ಹಾಗೂ ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button