ಆರೋಗ್ಯಜಿಲ್ಲಾಸುದ್ದಿ

ನ್ಯಾಯಕ್ಕಾಗಿ ಆರೋಗ್ಯ ಇಲಾಖೆ ನೌಕರರ ಬೆಂಗಳೂರು ಪಾದಯಾತ್ರೆ

ಸೇವಾ ಸಮಸ್ಯೆ, ವರ್ಗಾವಣೆ ತಾರತಮ್ಯ ನಿವಾರಣೆಗೆ ಆಗ್ರಹ; ಅ.5ರಿಂದ ಬೀದರ್‌ನಿಂದ ಬೆಂಗಳೂರಿನವರೆಗೆ ಪಾದಯಾತ್ರೆ

ಬೀದರ್, ಅ.3- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಳೆದ ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದು, ಹಲವು ವರ್ಷಗಳಿಂದ ಆಡಳಿತಾತ್ಮಕ ಕಿರುಕುಳ ಹಾಗೂ ಸೇವಾ ಸೌಲಭ್ಯಗಳಲ್ಲಿನ ತಾರತಮ್ಯ ಎದುರಿಸುತ್ತಿರುವುದಾಗಿ ಆರೋಪಿಸಿರುವ ಆರೋಗ್ಯ ಇಲಾಖೆ ನೌಕರ ಪ್ರಕಾಶ ಮಾಳಗೆ ಅವರು ನ್ಯಾಯಕ್ಕಾಗಿ ಬೀದರ್‌ನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನೂ ಆರು ತಿಂಗಳಲ್ಲಿ ನಿವೃತ್ತಿ ಜೀವನ ಆರಂಭವಾಗಲಿದ್ದು, ತಮಗೆ ಬರಬೇಕಾದ ಪಿಂಚಣಿ ಸೇರಿದಂತೆ ಸೇವಾ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ ಎಂದು ಆರೋಪಿಸಿದರು.

ತಮ್ಮ ಮೇಲಿನ ಆಡಳಿತಾತ್ಮಕ ಕಿರುಕುಳ, ಅನ್ಯಾಯದ ವರ್ಗಾವಣೆ ಹಾಗೂ ಸೇವಾ ಸೌಲಭ್ಯಗಳಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ಆರೋಪಿಸಿ ಮುಖ್ಯಮಂತ್ರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿರುವುದಾಗಿ ಹೇಳಿದರು.

ಅಕ್ಟೋಬರ್ 5ರಂದು ಸೋಮವಾರ ಬೆಳಿಗ್ಗೆ 9 ಗಂಟೆಗೆ ನಗರದ ಅಂಬೇಡ್ಕರ್ ವೃತ್ತಕ್ಕೆ ತೆರಳಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಬೆಂಗಳೂರಿನತ್ತ ಪಾದಯಾತ್ರೆ ಆರಂಭಿಸುವುದಾಗಿ ತಿಳಿಸಿದರು.

ಬ್ರಿಮ್ಸ್ ಸಂಸ್ಥೆಯ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಹಲವು ವರ್ಷಗಳಿಂದ ತೊಂದರೆ ಅನುಭವಿಸುತ್ತಿರುವುದಾಗಿ ಅವರು ಆರೋಪಿಸಿದರು. ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಬಹುತೇಕ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಬಳಸಿಕೊಂಡು ಆಡಳಿತ ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದರು.

2015ರಿಂದ ತಮ್ಮ ವಿರುದ್ಧ ವಿವಿಧ ರೀತಿಯ ಆಡಳಿತಾತ್ಮಕ ಕ್ರಮಗಳು ನಡೆಯುತ್ತಿದ್ದು, ಪದೇ ಪದೇ ವರ್ಗಾವಣೆ, ಕರ್ತವ್ಯ ಹಂಚಿಕೆಯಲ್ಲಿ ತಾರತಮ್ಯ, ವೇತನ ಹಾಗೂ ಇತರ ಸೇವಾ ಸೌಲಭ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ಹೇಳಿದರು. ನ್ಯಾಯಾಲಯ ಹಾಗೂ ಇಲಾಖೆಯ ವಿವಿಧ ಹಂತಗಳಲ್ಲಿ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ದೂರಿದರು.

ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲಿಯೂ ಸೇವೆ ಸಲ್ಲಿಸಿದ್ದರೂ ತಮ್ಮ ಸೇವೆಯನ್ನು ಸಮರ್ಪಕವಾಗಿ ಪರಿಗಣಿಸಿಲ್ಲ. ವೈದ್ಯಕೀಯ ವೆಚ್ಚ ಮರುಪಾವತಿ, ಬಾಕಿ ವೇತನ ಹಾಗೂ ಇತರ ಆರ್ಥಿಕ ಸೌಲಭ್ಯಗಳ ವಿಚಾರದಲ್ಲಿಯೂ ಅನ್ಯಾಯವಾಗಿದೆ ಎಂದು ಆರೋಪಿಸಿದರು. ವಿವಿಧ ದಿನಾಂಕಗಳಲ್ಲಿ ಹೊರಡಿಸಲಾದ ಆದೇಶಗಳು, ವರ್ಗಾವಣೆಗಳು ಹಾಗೂ ನ್ಯಾಯಾಲಯದ ಪ್ರಕರಣಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಅವರು ವಿವರಿಸಿದರು.

ತಮ್ಮ ವಿರುದ್ಧ ನಡೆದಿರುವ ಕ್ರಮಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಸಂಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಪಾತ್ರವನ್ನು ಪರಿಶೀಲಿಸಿ ತಪ್ಪು ಕಂಡುಬಂದಲ್ಲಿ ಕಾನೂನು ಹಾಗೂ ಇಲಾಖಾ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾವು ಸುಮಾರು ₹35 ಲಕ್ಷಕ್ಕೂ ಅಧಿಕ ಸಾಲದ ಹೊರೆ ಎದುರಿಸುತ್ತಿದ್ದು, ಪಿಂಚಣಿ ಸಂಬಂಧಿತ ಸಮಸ್ಯೆಯಿಂದ ತೀವ್ರ ಒತ್ತಡದಲ್ಲಿರುವುದಾಗಿ ಅವರು ತಿಳಿಸಿದರು. ತಮ್ಮ ಹೇಳಿಕೆಯಲ್ಲಿ ಆತ್ಮಹತ್ಯೆಯ ಉಲ್ಲೇಖ ಮಾಡಿದ್ದು, ತಮ್ಮ ಸಮಸ್ಯೆಗೆ ಶೀಘ್ರ ಪರಿಹಾರ ದೊರೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲೆ ವಿಶ್ವಾಸವಿದ್ದು, ತಮ್ಮ ಸಮಸ್ಯೆಯನ್ನು ಪರಿಶೀಲಿಸಿ ನ್ಯಾಯ ದೊರಕಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಾರೆ ಎಂಬ ನಂಬಿಕೆ ಇದೆ ಎಂದು ಪ್ರಕಾಶ ಮಾಳಗೆ ಹೇಳಿದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button