ಆರೋಗ್ಯಜಿಲ್ಲಾಸುದ್ದಿ

ಅನುಚ್ಛೇದ 171(3) ತಿದ್ದುಪಡಿಗೆ ಆಗ್ರಹ: ರಾಜ್ಯಪಾಲರಿಗೆ ಮನವಿ

ಕಲಬುರಗಿ, ಸೆ.30: ಸಂವಿಧಾನದ ಅನುಚ್ಛೇದ 171(3)ಕ್ಕೆ ತಿದ್ದುಪಡಿ ತಂದು ವಿಧಾನ ಪರಿಷತ್ತಿನ ನಾಮನಿರ್ದೇಶನ ಕ್ಷೇತ್ರವನ್ನು ವಿಸ್ತರಿಸುವಂತೆ ಆಗ್ರಹಿಸಿ ಅನುಚ್ಛೇದ 171(3) ತಿದ್ದುಪಡಿ ಹೋರಾಟ ಸಮಿತಿಯ ಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷ, ನ್ಯಾಯವಾದಿ ಜೆ.ಎಸ್. ವಿನೋದಕುಮಾರ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ತಹಶೀಲ್ದಾರ್ ಶಿವಪ್ರಭು ಹಿರೇಮಠ ಅವರಿಗೆ ಮನವಿ ಸಲ್ಲಿಸಲಾಯಿತು.

ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವ ಸಂದರ್ಭದಲ್ಲಿ ಪ್ರಸ್ತುತ ಇರುವ ಕ್ಷೇತ್ರಗಳ ಜೊತೆಗೆ ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ವೈದ್ಯರು, ವಕೀಲರು, ಪತ್ರಕರ್ತರು, ಹಿರಿಯ ನಾಗರಿಕರು ಹಾಗೂ ರೈತರನ್ನೂ ಪರಿಗಣಿಸುವಂತೆ ಸಂವಿಧಾನದಲ್ಲಿ ಸೂಕ್ತ ತಿದ್ದುಪಡಿ ತರಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಇತರ ವರ್ಗಗಳನ್ನೂ ವಿಧಾನ ಪರಿಷತ್ತಿನ ನಾಮನಿರ್ದೇಶನ ವ್ಯಾಪ್ತಿಗೆ ಸೇರಿಸಬೇಕು. ಇದರಿಂದ ವಿವಿಧ ಕ್ಷೇತ್ರಗಳ ಅನುಭವ ಹಾಗೂ ಸಾಮಾಜಿಕ ಸೇವೆಯನ್ನು ಹೊಂದಿರುವವರಿಗೆ ಪ್ರಜಾಪ್ರಭುತ್ವದ ಶಾಸನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ದೊರೆಯಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಕುರಿತು ರಾಜ್ಯ ಸರ್ಕಾರ ಸೂಕ್ತ ಪ್ರಸ್ತಾವನೆ ಸಿದ್ಧಪಡಿಸಿ, ಭಾರತದ ರಾಷ್ಟ್ರಪತಿಗಳ ಗಮನಕ್ಕೆ ತಂದು ಸಂವಿಧಾನ ತಿದ್ದುಪಡಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಬೇಕು ಎಂದು ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಲಾಗಿದೆ.

ಅನುಚ್ಛೇದ 171(3)ಕ್ಕೆ ತಿದ್ದುಪಡಿ ತಂದು ವಿಧಾನ ಪರಿಷತ್ತಿನ ನಾಮನಿರ್ದೇಶನ ಕ್ಷೇತ್ರವನ್ನು ವಿಸ್ತರಿಸುವುದು ಹಾಗೂ ವಿವಿಧ ವೃತ್ತಿ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೂ ಪ್ರಾತಿನಿಧ್ಯ ಕಲ್ಪಿಸುವುದು ಅಗತ್ಯವಾಗಿದೆ ಎಂದು ಹೋರಾಟ ಸಮಿತಿ ಪ್ರತಿಪಾದಿಸಿದೆ.

ಈ ಸಂದರ್ಭದಲ್ಲಿ ಹಿರಿಯ ವಕೀಲ ಮೇಘನಾಥ ಶಿವಾಚಾರ್ಯಮಠ, ಸಮಾಜಶಾಸ್ತ್ರ ಉಪನ್ಯಾಸಕ ಬಿ.ಎಂ. ರಾವುರ್, ಮರತೂರ ಗ್ರಾಮದ ರೈತ ಹಾಗೂ ಸಮಾಜ ಸೇವಕ ಮಸಗಲ್ ಶಿವಶಂಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button