ಜಿಲ್ಲಾಸುದ್ದಿ

ಬಾಲ್ಯವಿವಾಹ, ಬಾಲಕಾರ್ಮಿಕ, ಪೋಕ್ಸೋ ಪ್ರಕರಣಗಳಿಗೆ ಸಂಪೂರ್ಣ ತಡೆ ಹಾಕಿ: ಜಿಲ್ಲಾಧಿಕಾರಿ ಇಕ್ರಂ ಶರೀಫ್

ಮಕ್ಕಳ ರಕ್ಷಣೆಗಾಗಿ ಜಿಲ್ಲಾಡಳಿತ, ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮನ್ವಯದಿಂದ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ

ಕಲಬುರಗಿ, ಆ.8: ಜಿಲ್ಲೆಯಲ್ಲಿ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಮಕ್ಕಳ ಭಿಕ್ಷಾಟನೆ ಹಾಗೂ ಪೋಕ್ಸೋ ಪ್ರಕರಣಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಇಕ್ರಂ ಶರೀಫ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಮಕ್ಕಳ ಮೇಲ್ವಿಚಾರಣಾ ಸಮಿತಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಮುಖ್ಯಮಂತ್ರಿ ಬಾಲಸೇವಾ ಯೋಜನೆ ಹಾಗೂ ಪಿ.ಎಂ. ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಗಳ ಜಿಲ್ಲಾ ಮೇಲ್ವಿಚಾರಣಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿರುವ ಸರ್ಕಾರಿ ಹಾಗೂ ವಿವಿಧ ಸಂಘ-ಸಂಸ್ಥೆಗಳು ನಡೆಸುವ ಬಾಲಮಂದಿರಗಳಿಗೆ ಸಂಬಂಧಿಸಿದ ಅಧಿಕಾರಿಗಳು ಪ್ರತಿ ತಿಂಗಳು ಕಡ್ಡಾಯವಾಗಿ ಭೇಟಿ ನೀಡಿ, ನೈರ್ಮಲ್ಯ, ಭದ್ರತೆ ಹಾಗೂ ಮೂಲಸೌಕರ್ಯಗಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಲೂರು ಶ್ರೀನಿವಾಸ್ ಮಾತನಾಡಿ, ಪೋಕ್ಸೋ ಪ್ರಕರಣಗಳಲ್ಲಿ 60 ದಿನಗಳ ಕಾಲಮಿತಿಯೊಳಗೆ ದೋಷಾರೋಪಣಾ ಪಟ್ಟಿ ಸಲ್ಲಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ವಿ. ಮಂಜುಳಾ ಪಾಟೀಲ್ ಮಾಹಿತಿ ನೀಡುತ್ತಾ, ಜಿಲ್ಲೆಯಲ್ಲಿ ಇದುವರೆಗೆ 71 ಬಾಲ್ಯವಿವಾಹ, 22 ಬಾಲಕಾರ್ಮಿಕ, 16 ಪೋಕ್ಸೋ ಹಾಗೂ 14 ಮಕ್ಕಳ ಭಿಕ್ಷಾಟನೆ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು. ಈಗಾಗಲೇ 198 ಮಕ್ಕಳನ್ನು ಸುರಕ್ಷಿತವಾಗಿ ಪೋಷಕರ ವಶಕ್ಕೆ ಒಪ್ಪಿಸಲಾಗಿದೆ. ಮಕ್ಕಳ ಸಹಾಯವಾಣಿಗೆ ಬಂದ 293 ಕರೆಗಳಲ್ಲಿ 285 ದೂರುಗಳನ್ನು ಇತ್ಯರ್ಥಪಡಿಸಲಾಗಿದ್ದು, 80 ಬಾಲಕಿಯರು ಹಾಗೂ ಒಬ್ಬ ಬಾಲಕನ ಬಾಲ್ಯವಿವಾಹವನ್ನು ಯಶಸ್ವಿಯಾಗಿ ತಡೆಯಲಾಗಿದೆ. ವಿಶೇಷ ಕಾರ್ಯಾಚರಣೆಗಳ ಮೂಲಕ 22 ಬಾಲಕಾರ್ಮಿಕರು ಹಾಗೂ 13 ಭಿಕ್ಷಾಟನೆಯಲ್ಲಿ ತೊಡಗಿದ್ದ ಮಕ್ಕಳನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಆಸ್ಪತ್ರೆಗಳಲ್ಲಿ ಅಪ್ರಾಪ್ತ ವಯಸ್ಸಿನ ಗರ್ಭಧಾರಣೆ ಪ್ರಕರಣಗಳು ಕಂಡುಬಂದರೆ ಕಡ್ಡಾಯವಾಗಿ ಮೆಡಿಕೋ-ಲೀಗಲ್ ಪ್ರಕರಣ ದಾಖಲಿಸಿ, ಆರ್‌ಸಿಎಚ್ ಪೋರ್ಟಲ್ ಹಾಗೂ ತಾಯಿ ಕಾರ್ಡ್ ಆಧರಿಸಿ ಎಫ್‌ಐಆರ್ ದಾಖಲಿಸುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪೋಕ್ಸೋ ಹಾಗೂ ಬಾಲ್ಯವಿವಾಹ ಸಂತ್ರಸ್ತರಿಗೆ ತಲಾ ₹5,000 ತುರ್ತು ನೆರವು ನೀಡಲಾಗುತ್ತಿದೆ. ಎಚ್‌ಐವಿ ಸೋಂಕಿನಿಂದ ಬಳಲುತ್ತಿರುವ ಪೋಷಕರ ಮಕ್ಕಳಿಗೆ ಅಥವಾ ಪೋಷಕರಲ್ಲದ ಸಂಬಂಧಿಕರು ಹಾಗೂ ಇತರ ಕುಟುಂಬದವರು ಸಾಕುತ್ತಿರುವ ಮಕ್ಕಳಿಗೆ ಮಾಸಿಕ ₹2,000 ಧನಸಹಾಯ ಒದಗಿಸಲಾಗುತ್ತಿದೆ. ಪ್ರಾಯೋಜಕತ್ವ ಯೋಜನೆಯಡಿ ಅನಾಥರು, ಕುಷ್ಠರೋಗಿಗಳ ಮಕ್ಕಳು ಹಾಗೂ ಸಂಕಷ್ಟದಲ್ಲಿರುವ 18 ವರ್ಷದೊಳಗಿನ ಮಕ್ಕಳಿಗೆ ₹4,000 ಮತ್ತು ಬಾಲಗರ್ಭಿಣಿಯರಿಗೆ ₹6,000 ನೆರವು ನೀಡಲಾಗುತ್ತಿದೆ ಎಂದು ತಿಳಿಸಲಾಯಿತು.

ಉಚಿತ ಶಿಕ್ಷಣ ಮತ್ತು ವೃತ್ತಿ ತರಬೇತಿ

ಬಾಲಮಂದಿರದ ಮಕ್ಕಳಿಗೆ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿ ಉಚಿತ ಪ್ರವೇಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. 18 ವರ್ಷ ಪೂರೈಸಿದ ಯುವಕರಿಗೆ ‘ಉಪ್ಕಾರ’ ಯೋಜನೆಯಡಿ ಮಾಸಿಕ ₹3,500 ನೀಡಲಾಗುತ್ತಿದ್ದು, **’ಅನುಪಾಲನಾ ಗೃಹ’**ಗಳ ಮೂಲಕ 19 ಬಾಲಕಿಯರಿಗೆ ಪದವಿ ಶಿಕ್ಷಣ, ನರ್ಸಿಂಗ್ ಹಾಗೂ ಟೈಲರಿಂಗ್ ತರಬೇತಿ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಬಾಲ ನ್ಯಾಯ ಮಂಡಳಿಯಲ್ಲಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುವವರ ವಿರುದ್ಧ ಯಾವುದೇ ದಯೆ ತೋರದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೇ, ನಗರ ಕಾನೂನು ಸುವ್ಯವಸ್ಥೆ ಡಿಸಿಪಿ ಶಾಲೊ, ಪ್ರೊಬೇಷನರಿ ಐಎಎಸ್ ಅಧಿಕಾರಿ ಶ್ರೀಕರ್ ಮೋಘ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಂಕ್ರಮ ಡವಳಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ಶರಣಪ್ಪ, ತಾಲೂಕು ಮಟ್ಟದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button