ಧಾರ್ಮಿಕ

ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆ: ಉಜ್ಜಯಿನಿ ಜಗದ್ಗುರುಗಳ ಕರೆ

ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಪ್ರಕೃತಿಯನ್ನು ಉಳಿಸೋಣ; ಕೋಟಿ ಬಿಲ್ವವೃಕ್ಷ ಆಂದೋಲನದಡಿ ಸಸಿಗಳ ವಿತರಣೆ

ಕಲಬುರಗಿ, ಆ.6: ಪರಿಸರ ಸಂರಕ್ಷಣೆ ಎಂದರೆ ಕೇವಲ ಪ್ರಕೃತಿಯನ್ನು ಉಳಿಸುವುದಲ್ಲ, ನಮ್ಮ ಬದುಕು ಮತ್ತು ಮುಂದಿನ ಪೀಳಿಗೆಯ ಭವಿಷ್ಯವನ್ನು ಕಾಪಾಡುವ ಮಹತ್ವದ ಕಾರ್ಯವಾಗಿದೆ. ಪ್ರತಿಯೊಬ್ಬರೂ ಎಲ್ಲೆಡೆ ಗಿಡಗಳನ್ನು ನೆಟ್ಟು, ಅವುಗಳನ್ನು ಪೋಷಿಸಿ ಪರಿಸರವನ್ನು ರಕ್ಷಿಸಬೇಕು ಎಂದು ಉಜ್ಜಯಿನಿ ಸದ್ಧರ್ಮಸಿಂಹಾಸನಾಧೀಶ್ವರ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಕರೆ ನೀಡಿದರು.

ನಗರದ ಸೋಗಸನಕೇರಿಯ ಶ್ರೀ ಗುರುಶಾಂತಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಸಿದ್ಧಾಂತ ಶಿಖಾಮಣಿ ವಚನ ಸಾಹಿತ್ಯ ಸಮನ್ವಯಾತ್ಮಕ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಪರಿಸರ ರಕ್ಷಣೆಯ ಮಹತ್ವವನ್ನು ವಿವರಿಸಿದರು.

ಆಳಂದದ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅವರ ಅಧ್ಯಕ್ಷತೆಯಲ್ಲಿ, ಬೀದರ್ ಜಿಲ್ಲೆಯ ಪರಿಸರವಾದಿ ಶೈಲೇಂದ್ರ ಕವಡಿಯವರ ಉಪಸ್ಥಿತಿಯಲ್ಲಿ ಕೋಟಿ ಬಿಲ್ವವೃಕ್ಷ ಆಂದೋಲನದ ಅಂಗವಾಗಿ ರೈತರಿಗೆ ವಿವಿಧ ಸಸಿಗಳನ್ನು ವಿತರಿಸಲಾಯಿತು. ಪರಿಸರವಾದಿ ಶೈಲೇಂದ್ರ ಕವಡಿಯವರು ಪ್ರತಿವರ್ಷ ಸಾವಿರಾರು ಸಸಿಗಳನ್ನು ಉಚಿತವಾಗಿ ವಿತರಿಸುವ ಮೂಲಕ ಪರಿಸರ ಸಂರಕ್ಷಣೆಗೆ ನೀಡುತ್ತಿರುವ ಸೇವೆ ಶ್ಲಾಘನೀಯ ಎಂದು ಜಗದ್ಗುರುಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಕಡಗಂಚಿಯ ವೀರಭದ್ರ ಶಿವಾಚಾರ್ಯರು ಹಾಗೂ ಕೇದಾರನಾಥ ಎಸ್. ಕುಲಕರ್ಣಿ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಅನೇಕರು ರಕ್ತದಾನ ಮಾಡಿದರು.

ಕಾರ್ಯಕ್ರಮದಲ್ಲಿ ಪಾಲಾದ ಡಾ. ಗುರುಮೂರ್ತಿ ಶಿವಾಚಾರ್ಯರು, ಚಂದನಕೇರಿಯ ರಾಚೋಟೇಶ್ವರ ಶಿವಾಚಾರ್ಯರು, ಕಪನೂರಿನ ಮಲ್ಲಿಕಾರ್ಜುನ ಸ್ವಾಮೀಜಿ, ಚಿನ್ಮಗೇರಿಯ ವೀರಮಹಾಂತ ಶಿವಾಚಾರ್ಯರು, ಶಿವಲಿಂಗೇಶ್ವರ ಶಿವಾಚಾರ್ಯರು, ಸಿದ್ದನಕೇರಿಯ ಹೊನ್ನಲಿಂಗೇಶ್ವರ ಸ್ವಾಮೀಜಿ, ಮುದ್ನಾಳದ ಮುರುಗೇಂದ್ರ ದೇವರು, ಸುಲೇಪೇಟೆ ಹಾಗೂ ಕಡಗಂಚಿಯ ಶ್ರೀಗಳು ಸೇರಿದಂತೆ ಹಲವು ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಗೌರಿ ಚಿಂಚಕೋಟಿ, ಆನಂದರಾವ್ ಪಾಟೀಲ್, ಚಂದ್ರಕಾಂತ ಭೂಸನೂರು, ನಾಗಯ್ಯಸ್ವಾಮಿ, ಶರಣಬಸಪ್ಪ ಬೆಣ್ಣೂರ, ಜಗದೀಶ್ ಬಿರಾದಾರ್, ಆನಂದರಾವ್ ಪಾಟೀಲ್ ಕೊರಳ್ಳಿ, ಶಿವಾನಂದ ಅವರಳ್ಳಿ, ಬಿ.ಜಿ. ಸ್ವಾಮಿ ಗೋಳಾ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಬೆಳಿಗ್ಗೆ ಲಿಂಗದೀಕ್ಷೆ ಮತ್ತು ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಪೀಠದ ಗುರುಕುಲದ ಸಾಧಕರಿಂದ ವೇದಘೋಷ ನಡೆಯಿತು. ಮಲ್ಲಿಕಾರ್ಜುನ ತಡಕಲ್ ಸ್ವಾಗತಿಸಿದರು. ಬಳಿಕ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಯುವ ಸಾಹಿತಿ ಶಿವಯ್ಯ ಮಠಪತಿ ಕಾರ್ಯಕ್ರಮ ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button