ಸಾಹಿತ್ಯ

ಆಗಸ್ಟ್‌ 9ರಂದು ಕಲಬುರಗಿಯಲ್ಲಿ ದಾಸ ಸಾಹಿತ್ಯ ಸಮ್ಮೇಳನ

ದಾಸ ಸಾಹಿತ್ಯ ಸಮಾಜಕ್ಕೆ ದಾರಿದೀಪ; ಸಮ್ಮೇಳನಾಧ್ಯಕ್ಷರಾಗಿ ಡಾ. ಸುರೇಶ್ ಎಲ್. ಜಾಧವ್ ಅವರಿಗೆ ಅಧಿಕೃತ ಆಹ್ವಾನ

ಕಲಬುರಗಿ, ಆ.6: ದಾಸ ಸಾಹಿತ್ಯವು ಆತ್ಮಶುದ್ಧಿ, ಭಕ್ತಿ ಮತ್ತು ಮಾನವೀಯ ಮೌಲ್ಯಗಳ ಸಂದೇಶ ಸಾರುವ ಅಮೂಲ್ಯ ಸಾಹಿತ್ಯವಾಗಿದ್ದು, ಇಂದಿನ ಸಮಾಜಕ್ಕೆ ಅದರ ಸಾರವನ್ನು ತಲುಪಿಸುವ ಅಗತ್ಯವಿದೆ ಎಂದು ವಿಭಾಗದ 4ನೇ ದಾಸ ಸಾಹಿತ್ಯ ಸಮ್ಮೇಳನದ ನಿಯೋಜಿತ ಸಮ್ಮೇಳನಾಧ್ಯಕ್ಷ ಡಾ. ಸುರೇಶ್ ಎಲ್. ಜಾಧವ್ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಪರಿಷತ್ತಿನ ದಕ್ಷಿಣ ವಲಯದ ಆಶ್ರಯದಲ್ಲಿ ಆಗಸ್ಟ್‌ 9ರಂದು ನಗರದ ಕನ್ನಡ ಭವನದಲ್ಲಿ ನಡೆಯಲಿರುವ ದಾಸ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರಿಗೆ ಅಧಿಕೃತ ಆಹ್ವಾನ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಸುರೇಶ್ ಎಲ್. ಜಾಧವ್, ದಾಸ ಸಾಹಿತ್ಯವು ಧ್ಯಾನ, ತಪಸ್ಸು ಮತ್ತು ಜೀವನ ಪರಿಷ್ಕರಣೆಗೆ ದಾರಿದೀಪವಾಗಿದೆ. ಅನೇಕ ಹರಿದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸಿ ಉತ್ತಮ ಜೀವನ ಮೌಲ್ಯಗಳನ್ನು ಸಾರಿದ್ದಾರೆ. ಅಂತಹ ದಾಸ ಸಾಹಿತ್ಯದ ನಿಜವಾದ ಸಂದೇಶವನ್ನು ಇಂದಿನ ಪೀಳಿಗೆಗೆ ತಲುಪಿಸುವುದು ಅತ್ಯಗತ್ಯ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ದಾಸ ಸಾಹಿತ್ಯವು ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗಿಲ್ಲ. ಅದು ಸಮಾನತೆ, ಮಾನವೀಯತೆ ಹಾಗೂ ಭಕ್ತಿಯ ಮೌಲ್ಯಗಳನ್ನು ಸಾರುವ ಜನಪರ ಸಾಹಿತ್ಯವಾಗಿದೆ. ಕನಕದಾಸರು, ಪುರಂದರದಾಸರು ಸೇರಿದಂತೆ ಹರಿದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜಕ್ಕೆ ಶಾಶ್ವತ ಮೌಲ್ಯಗಳನ್ನು ನೀಡಿದ್ದಾರೆ. ಕನ್ನಡ ಸಾಹಿತ್ಯದ ವಚನ ಮತ್ತು ದಾಸ ಸಾಹಿತ್ಯದ ಸಾರವನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಪರಿಷತ್ತು ನಿರಂತರವಾಗಿ ಮಾಡುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ರಮೇಶ್ ಚಿಚಕೋಟೆ, ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಧರ್ಮಣ್ಣ ಎಚ್. ಧನ್ನಿ, ಸುರೇಖಾ ಎಸ್. ಜಾಧವ್, ದಕ್ಷಿಣ ವಲಯ ಅಧ್ಯಕ್ಷ ರವಿಕುಮಾರ ಶಹಾಪೂರಕರ, ರೇವಣಸಿದ್ದಪ್ಪ ಬೋಗಶೆಟ್ಟಿ, ಹಣಮಂತರಾವ್ ನಾಗಶೆಟ್ಟಿ ಪಾಟೀಲ, ಶರಣಗೌಡ ಮಾಳಿಪಾಟೀಲ, ಶಿವಶರಣಪ್ಪ ಬಿರಾದಾರ್, ಡಾ. ಲಿಂಗರಾಜ ಸಿರಗಾಪೂರ, ಡಾ. ಶೋಭಾದೇವಿ ಚೆಕ್ಕಿ, ಸೋಮಶೇಖರಯ್ಯ ಹೊಸಮಠ, ಗಣೇಶ ಚಿನ್ನಾಕಾರ, ರಾಜೇಂದ್ರ ಮಾಡಬೂಳ, ಮಲ್ಲಿನಾಥ ಸಂಗಶೆಟ್ಟಿ, ಗಂಗಾಧರ ಬಂಗರಗಿ, ಹಣಮಂತರಾವ್ ಪೆಂಚನಪಳ್ಳಿ, ಅನೀಲಕುಮಾರ ಪಾಟೀಲ ತೇಗಲತಿಪ್ಪಿ, ಡಾ. ಶಿವಲಿಂಗಪ್ಪ ಪಾಟೀಲ, ಮಧುಸೂಧನ ಚಿಂತನಪಳ್ಳಿ, ಸಂಗಪ್ಪ ಭೀಮಳ್ಳಿ, ಚಂದ್ರಕಾಂತ ಸೂರನ್, ಅಮೃತಪ್ಪ ಅಣೂರ, ಸೋಮಶೇಖರ ನಂದಿಧ್ವಜ, ಮಹಾಲಿಂಗಯ್ಯ ಸ್ವಾಮಿ, ರಾಜಶೇಖರ ಚಿಂಚೋಳಿ, ಪರಮಾನಂದ ಸರಸಾಂಬಿ, ಮಂಜುನಾಥ ಕಂಬಾಳಿಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button