ಶರಣ ಸಾಹಿತ್ಯ ಪರಿಷತ್ ಪ್ರಕಟಿತ ಎರಡು ಕೃತಿಗಳ ಬಿಡುಗಡೆ
ಶರಣರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರ್ ಕರೆ

ಯಾದಗಿರಿ: 12ನೇ ಶತಮಾನದ ಶರಣರ ಅನುಭಾವಿಕ ವಚನಗಳನ್ನು ಓದಿ, ಅವುಗಳ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಯುವ ಸಮೂಹವು ಶರಣ ಸಾಹಿತ್ಯದ ಅಭ್ಯಾಸಿಗಳಾಗಬೇಕು. ಸಮಾನತೆ ಮತ್ತು ಸಮ ಸಮಾಜದ ನಿರ್ಮಾಣಕ್ಕೆ ಶರಣರ ವಿಚಾರಗಳು ದಾರಿದೀಪವಾಗಿವೆ ಎಂದು ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರ್ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಕಾರ್ಯಾಲಯದ ಸಭಾಂಗಣದಲ್ಲಿ ಶನಿವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ಡಾ. ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ 111ನೇ ಜಯಂತಿ ಮಹೋತ್ಸವ ಹಾಗೂ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಎರಡು ಕೃತಿಗಳ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಚನ ಸಾಹಿತ್ಯ ಹಾಗೂ ಶರಣ ಸಾಹಿತ್ಯದಲ್ಲಿ ಸಮಾನತೆ ಮತ್ತು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ವಿಚಾರಗಳನ್ನು ಇಂದಿನ ಯುವಜನತೆ ತಿಳಿದುಕೊಂಡು ಸಮಾಜದಲ್ಲಿ ಅಳವಡಿಸಿಕೊಳ್ಳಬೇಕು. ಶರಣ ಸಾಹಿತ್ಯ ಪರಿಷತ್ತು ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಅವರು ಅನೇಕ ಸಾಹಿತಿಗಳ ಕೃತಿಗಳನ್ನು ಪ್ರಕಟಿಸುವ ಮೂಲಕ ಹೊಸ ಬರಹಗಾರರಿಗೆ ಅವಕಾಶ ಕಲ್ಪಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಗುರುಮಠಕಲ್ ಖಾಸಾಮಠದ ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ಮೈಸೂರಿನ ಸುತ್ತೂರು ಮಠದ 23ನೇ ಪೀಠಾಧಿಕಾರಿಯಾಗಿದ್ದ ಲಿಂ. ಪೂಜ್ಯ ಜಗದ್ಗುರು ಡಾ. ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ಅಕ್ಷರ, ಅನ್ನ ಮತ್ತು ಆರೋಗ್ಯ ದಾಸೋಹದ ಮೂಲಕ ಕೋಟ್ಯಂತರ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದ್ದರು. ಶೈಕ್ಷಣಿಕ ಚಿಂತನೆ ಹಾಗೂ ಸಮಾಜದ ಅಭಿವೃದ್ಧಿಗೆ ಮಠಗಳ ಕೊಡುಗೆ ಅಪಾರವಾಗಿದೆ ಎಂದರು.
ಸಾಹಿತಿ ಶಿವಣ್ಣ ಇಜೇರಿ ಅವರು ಅಶೋಕ ಮಳಗಲಿ ಅವರ ‘ಕಾಲಾತೀತ’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿ, ಮತ್ತೊಬ್ಬರ ನೋವಿಗೆ ಸ್ಪಂದಿಸಿ, ಕಣ್ಣೀರು ಒರೆಸುವವರೇ ನಿಜವಾದ ಶರಣರು. ಸತ್ಯಕ್ಕ, ಸೂಳೆ ಸಂಕವ್ವೆ, ಆಯ್ದಕ್ಕಿ ಲಕ್ಕಮ್ಮ ಸೇರಿದಂತೆ ಅನೇಕ ಶರಣರು ಪ್ರಾಮಾಣಿಕತೆಯ ಪ್ರತಿನಿಧಿಗಳಾಗಿದ್ದರು. ಆದರೆ ಇಂದಿನ ಸಮಾಜದಲ್ಲಿ ಕನಿಷ್ಠ ಪ್ರಾಮಾಣಿಕತೆಯೂ ಕಾಣದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ವಿಷಾದಿಸಿದರು. ಶರಣಗೌಡ ಪಾಟೀಲ ಅವರು ‘ಕಾಲಾತೀತ’ ಕೃತಿಯ ಪರಿಚಯ ಮಾಡಿದರು.
ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಅವರು ಡಾ. ಪ್ರದೀಪ ಹೆಬ್ರಿ ಅವರ ‘ಅತ್ಯುನ್ನತ ಅಮರತ್ವ’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿ, ಬಸವಾದಿ ಶರಣರ ವಿಚಾರಗಳನ್ನು ಕೇವಲ ಆಚರಿಸುವುದಷ್ಟೇ ಅಲ್ಲದೆ, ಅವುಗಳನ್ನು ಜೀವನದಲ್ಲಿ ಅನುಸರಿಸಬೇಕು ಎಂದು ಹೇಳಿದರು. ಕೃತಿಯ ಕುರಿತು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕಲಬುರಗಿ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ಶಿವರಂಜನ ಸತ್ಯಂಪೇಟೆ ಮಾತನಾಡಿದರು.
ಬಸವಣ್ಣನವರ ವ್ಯಕ್ತಿತ್ವದ ಮೇರು ಕೃತಿ ‘ಅತ್ಯುನ್ನತ ಅಮರತ್ವ’
ಮತ್ತೊಬ್ಬರ ಜೀವನಚರಿತ್ರೆ ಬರೆಯುವುದು ಅತ್ಯಂತ ಕಷ್ಟದ ಕೆಲಸ. ವಿಶ್ವದ ವಿರಳ ಮಹಾಮಾನವತಾವಾದಿಗಳಲ್ಲಿ ಒಬ್ಬರಾದ ಬಸವಣ್ಣನವರ ಕುರಿತ ‘ಅತ್ಯುನ್ನತ ಅಮರತ್ವ’ ಕೃತಿಯು ಅವರ ವಚನಗಳ ಆಧಾರದ ಮೇಲೆ ರೂಪುಗೊಂಡಿದೆ. ಬಸವಣ್ಣನವರಂತಹ ಮೇರು ವ್ಯಕ್ತಿತ್ವಕ್ಕೆ ಯಾವುದೇ ಚ್ಯುತಿ ತರದೆ, ಅವರ ಜೀವನ ಹಾಗೂ ವ್ಯಕ್ತಿತ್ವದ ಕುರಿತು ಮತ್ತಷ್ಟು ಬೆಳಕು ಚೆಲ್ಲುವ ಪ್ರಯತ್ನವನ್ನು ಕೃತಿ ಮಾಡುತ್ತದೆ.
ಅಂತರಂಗದ ಅರಿವು ಮೂಡಿಸುವ ‘ಕಾಲಾತೀತ’
ಪುಸ್ತಕದ ಹೆಸರೇ ಸೂಚಿಸುವಂತೆ ಕಲ್ಯಾಣದ ಶರಣರ ವಚನಗಳು ಕಾಲಾತೀತವಾಗಿವೆ. ಅವುಗಳನ್ನು ವಿಶ್ಲೇಷಿಸುವುದು ಅನುಭಾವದ ಅಡುಗೆ ಮಾಡಿ ಉಂಡ ಅನುಭವ ನೀಡುತ್ತದೆ. ಶರಣರ ವಚನಗಳ ಆಶಯ ಇಂದಿಗೂ ಸಂಪೂರ್ಣವಾಗಿ ಪರಿಪಾಲನೆಯಾಗುತ್ತಿಲ್ಲ. ವಚನಗಳ ಆಳವಾದ ಅರಿವು ಅಂತರಂಗವನ್ನು ಅರಿತುಕೊಳ್ಳಲು ನೆರವಾಗಲಿದ್ದು, ‘ಕಾಲಾತೀತ’ ಕೃತಿ ಈ ನಿಟ್ಟಿನಲ್ಲಿ ಮಹತ್ವದ್ದಾಗಿದೆ.
ಶರಣ ಸಾಹಿತ್ಯ ಪರಿಷತ್ ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಹಾಪುರ ತಾಲೂಕು ಘಟಕದ ಅಧ್ಯಕ್ಷ ಲಿಂಗಣ್ಣ ಪಡಶೆಟ್ಟಿ ವೇದಿಕೆಯಲ್ಲಿದ್ದರು. ಡಾ. ಭೀಮರಾಯ ಲಿಂಗೇರಿ ನಿರೂಪಿಸಿದರು. ಪ್ರಕಾಶ ಅಂಗಡಿ ಕನ್ನಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಮೋಟ್ನಳ್ಳಿ ಸ್ವಾಗತಿಸಿದರು. ಡಾ. ಎಸ್.ಎಸ್. ನಾಯಕ ವಂದಿಸಿದರು.
ಇದೇ ಸಂದರ್ಭದಲ್ಲಿ ವಚನಕಂಠ ಪಾಠ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಆರ್. ಮಹಾದೇವಪ್ಪ ತುಮಕೂರ, ಚಂದಪ್ಪ ತಾಯಮ್ಮಗೋಳ್, ಅಯ್ಯಣ್ಣ ಹುಂಡೇಕಾರ, ಪರ್ವತರೆಡ್ಡಿ ಬೆಂಡೆಬಂಬಳಿ, ವಿಠ್ಠಲ್ ಚಿಕಣಿ, ಸಂಗೀತಾ ಸೇರಿದಂತೆ ನೂರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



