ರಾಜಕೀಯ

‘ಮೂರು ಬಾರಿ ಸಚಿವ ಮಾಡುತ್ತೇನೆ ಎಂದರೂ ಮಾತು ಉಳಿಸಲಿಲ್ಲ’ – ಸಿದ್ದರಾಮಯ್ಯ ವಿರುದ್ಧ ಶಾಸಕ ಬಿ.ಆರ್. ಪಾಟೀಲ್ ಅಸಮಾಧಾನ

ಸಚಿವ ಸ್ಥಾನ ವಿಚಾರದಲ್ಲಿ ಭರವಸೆ ಈಡೇರಲಿಲ್ಲ; ಜಿಲ್ಲೆ ನಾಯಕರೇ ಅಡ್ಡಿಯಾಗಿದ್ದಾರೆ ಎಂಬ ಹೇಳಿಕೆಗೂ ಪ್ರಶ್ನೆ

ಕಲಬುರಗಿ, ಆ.6: ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರೂ ಅದನ್ನು ಈಡೇರಿಸಿಲ್ಲ ಎಂದು ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮ್ಮ ಸಚಿವ ಸ್ಥಾನಕ್ಕೆ ಜಿಲ್ಲೆಯ ಕೆಲ ನಾಯಕರು ಅಡ್ಡಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿ, “ಯಾವ ನಾಯಕರು ಅಡ್ಡಿಯಾಗಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಅದು ಕೇವಲ ನೆಪವೇ ಅಥವಾ ಸತ್ಯವೇ ಎಂಬುದೂ ಸ್ಪಷ್ಟವಿಲ್ಲ” ಎಂದು ಹೇಳಿದರು.

“ನಾನು ಸ್ವತಃ ಸಚಿವ ಸ್ಥಾನಕ್ಕಾಗಿ ಎಲ್ಲಿಯೂ ಹೋಗಿ ಕೇಳಿಲ್ಲ. ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ನನ್ನ ಗೆಲುವಿನ ಬಳಿಕ ಸಚಿವ ಸ್ಥಾನ ನೀಡುವುದಾಗಿ ಸಾರ್ವಜನಿಕವಾಗಿ ಭರವಸೆ ನೀಡಿದ್ದರು. ಮೂರು ಬಾರಿ ಸಚಿವನನ್ನಾಗಿ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಆ ಮಾತು ಉಳಿಸಿಕೊಳ್ಳಲಿಲ್ಲ. ಇದರಿಂದ ನನಗೆ ಬೇಸರವಾಗಿದೆ” ಎಂದು ತಿಳಿಸಿದರು.

ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿ 136 ಶಾಸಕರಿದ್ದು, ಎಲ್ಲರಿಗೂ ಸಚಿವ ಸ್ಥಾನ ನೀಡುವುದು ಸಾಧ್ಯವಿಲ್ಲ ಎಂಬ ವಾದ ಕೇಳಿಬರುತ್ತಿದೆ. ಆದರೆ ತಮಗೆ ನೀಡಿದ್ದ ಭರವಸೆಯನ್ನು ಪಾಲಿಸದಿರುವುದೇ ತಮ್ಮ ಅಸಮಾಧಾನಕ್ಕೆ ಕಾರಣ ಎಂದು ಅವರು ಹೇಳಿದರು.

2028ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಕೇಳಿದ ಪ್ರಶ್ನೆಗೆ, “ಕಾದು ನೋಡೋಣ” ಎಂದು ಸಂಕ್ಷಿಪ್ತವಾಗಿ ಉತ್ತರಿಸಿದ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿಗಳನ್ನು ತಳ್ಳಿಹಾಕಿದರು.

ತಾವು ರಾಜೀನಾಮೆ ನೀಡುತ್ತಿರುವ ಬಗ್ಗೆ ಕೆಲವೆಡೆ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು, ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಬಿ.ಆರ್. ಪಾಟೀಲ್ ಸ್ಪಷ್ಟಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button