ರಾಜ್ಯ

ಕಲಬುರಗಿ ಜಿಲ್ಲೆಗೆ ₹585.72 ಕೋಟಿ ಬೆಳೆ ವಿಮೆ ಪರಿಹಾರ ಮಂಜೂರು

2.87 ಲಕ್ಷ ರೈತರಿಗೆ ಮೊದಲ ಕಂತು ಜಮೆ; ಒಟ್ಟು ₹1,084.45 ಕೋಟಿ ಪರಿಹಾರ ವಿತರಣೆಗೆ ಸರ್ಕಾರ ಕ್ರಮ

ಕಲಬುರಗಿ, ಆ.3: 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 3,00,952 ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದು, ಅವರಿಗೆ ₹585.72 ಕೋಟಿ ಬೆಳೆ ವಿಮೆ ಪರಿಹಾರ ಮಂಜೂರಾಗಿದೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಪೈಕಿ 2,87,696 ರೈತರಿಗೆ ಮೊದಲ ಕಂತಿನ ರೂಪದಲ್ಲಿ ₹243.52 ಕೋಟಿ ಈಗಾಗಲೇ ಜಮೆ ಮಾಡಲಾಗಿದೆ. ಇದರಲ್ಲಿ 2,67,133 ರೈತರಿಗೆ ₹234.73 ಕೋಟಿ ಮಧ್ಯಂತರ ಪರಿಹಾರ ಹಾಗೂ 20,563 ರೈತರಿಗೆ ₹8.79 ಕೋಟಿ ಸ್ಥಳೀಯ ವಿಕೋಪ ಪರಿಹಾರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿದೆ.

ಎರಡನೇ ಕಂತಿನ ₹221 ಕೋಟಿ ಪೈಕಿ ಈಗಾಗಲೇ ₹54 ಕೋಟಿ ಬಿಡುಗಡೆಯಾಗಿದ್ದು, ಉಳಿದ ಮೊತ್ತವನ್ನು ಕೆಲವೇ ದಿನಗಳಲ್ಲಿ ರೈತರ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಉಳಿದ ₹67 ಕೋಟಿ ಬಿಡುಗಡೆಯ ಪ್ರಕ್ರಿಯೆಯೂ ಶೀಘ್ರ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.

2025-26ನೇ ಸಾಲಿನ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಅಧಿಕ ಮಳೆಯಿಂದಾಗಿ ಜಿಲ್ಲೆಯ 3.24 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೊಳಗಾಗಿತ್ತು. ಈ ಹಿನ್ನೆಲೆಯಲ್ಲಿ 3,26,183 ರೈತರಿಗೆ ಒಟ್ಟು ₹498.73 ಕೋಟಿ ಬೆಳೆ ಹಾನಿ ಪರಿಹಾರವನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ.

ಈ ಪರಿಹಾರದಲ್ಲಿ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಮಾರ್ಗಸೂಚಿಯಡಿ ₹250 ಕೋಟಿ ಹಾಗೂ ರಾಜ್ಯ ಸರ್ಕಾರದ ವಿಶೇಷ ಪ್ಯಾಕೇಜ್ ಅಡಿ ₹248.73 ಕೋಟಿ ವಿತರಿಸಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.

ಒಟ್ಟಾರೆ 2025-26ನೇ ಸಾಲಿನಲ್ಲಿ ಕಲಬುರಗಿ ಜಿಲ್ಲೆಯ ರೈತರಿಗೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಅಡಿ ₹250 ಕೋಟಿ, ರಾಜ್ಯ ಸರ್ಕಾರದ ವಿಶೇಷ ಪ್ಯಾಕೇಜ್ ಅಡಿ ₹248.73 ಕೋಟಿ ಹಾಗೂ ಬೆಳೆ ವಿಮೆ ಪರಿಹಾರವಾಗಿ ₹585.72 ಕೋಟಿ ಸೇರಿದಂತೆ ಒಟ್ಟು ₹1,084.45 ಕೋಟಿ ಪರಿಹಾರ ವಿತರಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button