ಎಸ್‌ಐಆರ್ ಪ್ರಕ್ರಿಯೆ ವಿರುದ್ಧ ನಟ ಪ್ರಕಾಶ್ ರಾಜ್ ಆಕ್ರೋಶ

ಕಲಬುರಗಿ, ಸೆ.24: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಸಾಮಾನ್ಯ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಆರೋಪಿಸಿದರು.
ನಗರದ ರಿಂಗ್ ರಸ್ತೆಯ ರಾಮನಗರ ಹಾಗೂ ಮಿಸ್ಬಾ ಕಾಲೊನಿಯಲ್ಲಿ ಎಸ್‌ಐಆರ್ ಪರಿಶೀಲನೆ ಹಾಗೂ ಪ್ರತಿ ಮನೆಗೆ ಭೇಟಿ ನೀಡುವ ಕಾರ್ಯಕ್ರಮದ ಅಂಗವಾಗಿ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅವರು ಮಾತನಾಡಿದರು.
ಒಂದು ಕುಟುಂಬದ ನಾಲ್ವರು ಸದಸ್ಯರ ಪೈಕಿ ಒಬ್ಬರನ್ನು ಮತದಾರರ ಪಟ್ಟಿಯಲ್ಲಿ ‘ಮೃತ’ ಎಂದು ನಮೂದಿಸಿ, ಉಳಿದ ಮೂವರನ್ನು ‘ಶಾಶ್ವತವಾಗಿ ಸ್ಥಳಾಂತರಗೊಂಡವರು’ ಎಂದು ದಾಖಲಿಸುವಂತಹ ಪ್ರಕರಣಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿದರು. ಇಂತಹ ಕ್ರಮಗಳಿಂದ ಜನರು ಎಲ್ಲಿ ಹೋಗಬೇಕು ಎಂದು ಪ್ರಶ್ನಿಸಿದರು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅರ್ಜಿಗಳನ್ನು ಬಿಎಲ್‌ಒಗಳು ಪಡೆದು ಅಪ್‌ಲೋಡ್ ಮಾಡುತ್ತಿದ್ದಾರೆ. ಕೆಲವು ಕಡೆ ಅರ್ಜಿಗಳಲ್ಲಿ ಕಾಗುಣಿತ ಸೇರಿದಂತೆ ತಪ್ಪುಗಳಿದ್ದರೂ ಅವುಗಳನ್ನು ಮತ್ತೊಮ್ಮೆ ಪರಿಶೀಲಿಸಲು ಅವಕಾಶ ನೀಡುವ ಬದಲು ಜನರನ್ನು ಗೊಂದಲಕ್ಕೆ ಸಿಲುಕಿಸಲಾಗುತ್ತಿದೆ ಎಂದು ಪ್ರಕಾಶ್ ರಾಜ್ ದೂರಿದರು.
ರಾಜ್ಯದಲ್ಲಿ ಎಸ್‌ಐಆರ್ ಪಟ್ಟಿಗೆ 5,21,957 ಜನರನ್ನು ಸೇರಿಸಲಾಗಿದೆ ಎಂದು ಹೇಳಲಾಗುತ್ತಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನುಪಮ ಕುಮಾರ್ ಅವರು ಈ ಪ್ರಕ್ರಿಯೆಗೆ ಸಮಯ ನೀಡಲಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಅರ್ಜಿಗಳಲ್ಲಿ ತಪ್ಪುಗಳಿದ್ದರೆ ಅವುಗಳನ್ನು ಸರಿಪಡಿಸಲು ಮತ್ತೊಮ್ಮೆ ಅವಕಾಶ ನೀಡಬಾರದೇ? ಅಧಿಕಾರಿಗಳು ಮನೆಗಳಿಗೆ ತೆರಳಿ ಪರಿಶೀಲನೆ ನಡೆಸುತ್ತಿಲ್ಲ ಏಕೆ? ಎಂದು ಅವರು ಪ್ರಶ್ನಿಸಿದರು.
ಎಸ್‌ಐಆರ್‌ಗೆ ಸಂಬಂಧಿಸಿದಂತೆ ಜನರಿಗೆ ನೋಟಿಸ್‌ಗಳನ್ನು ನೀಡಲಾಗುತ್ತಿದ್ದು, ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿರುವುದು ಮತ್ತೊಂದು ಸಮಸ್ಯೆಯಾಗಿದೆ. ಸುಪ್ರೀಂ ಕೋರ್ಟ್ ಕೂಡ ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು ಎಂದು ಸೂಚಿಸಿದೆ ಎಂದು ಅವರು ಹೇಳಿದರು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಯಂತ್ರಗಳು ಕೆಲಸ ಮಾಡುತ್ತಿವೆಯೋ ಅಥವಾ ಮನುಷ್ಯರು ಕಾರ್ಯನಿರ್ವಹಿಸುತ್ತಿದ್ದಾರೆಯೋ ಎಂಬ ಪ್ರಶ್ನೆಯನ್ನೂ ನ್ಯಾಯಾಲಯ ಎತ್ತಿದೆ. ಹೀಗಾಗಿ ಜನರು ಸಲ್ಲಿಸಬೇಕಾದ ದಾಖಲೆಗಳ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು ಎಂದು ಪ್ರಕಾಶ್ ರಾಜ್ ಒತ್ತಾಯಿಸಿದರು.
ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್‌ಗೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ನ್ಯಾಯಮಂಡಳಿಗಳಿಗೆ ಹೋಗುತ್ತಿವೆ. ಅಲ್ಲಿನ ಪ್ರಕರಣಗಳ ವಿಚಾರಣೆ ಪೂರ್ಣಗೊಳ್ಳಲು ಹಲವು ವರ್ಷಗಳು ಬೇಕಾಗುವ ಸಾಧ್ಯತೆಯಿದೆ. ಅಂತಹ ಪರಿಸ್ಥಿತಿ ಕರ್ನಾಟಕದಲ್ಲೂ ನಿರ್ಮಾಣವಾಗಬಾರದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜನಾಂದೋಲನದ ರೇಣುಕಾ ಸರಡಗಿ, ಕೆ. ನೀಲಾ, ಮೀನಾಕ್ಷಿ ಬಾಳಿ, ಕೆ.ಎಲ್. ಅಶೋಕ್, ಲಕ್ಷ್ಮಣ ಮಾಘಣಗೇರಾ, ರೇಣುಕಾ ಸಿಂಗೆ, ಸಲೀಂ ಚಿತ್ತಾಪುರಿ, ಮುಬೀನ್ ಅಹ್ಮದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



