ಶ್ರೀ ದತ್ತಾಶ್ರಮದಲ್ಲಿ ಗುರುಪೂರ್ಣಿಮೆ ಸಂಭ್ರಮ
“ಗುರು ಎಂದರೆ ಮಾತೃಸ್ವರೂಪಿ” ಎಂದು ಡಾ. ಎಂ.ಜಿ. ದೇಶಪಾಂಡೆ ಅಭಿಪ್ರಾಯ; ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭಕ್ತರ ಮೆಚ್ಚುಗೆ.

ಬೀದರ್, ಜು. 31: ನಗರದ ರಾಮಪುರ ಕಾಲೋನಿಯ ಶ್ರೀ ದತ್ತಾಶ್ರಮ ಕಲ್ಚರಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶ್ರೀ ದತ್ತಾಶ್ರಮದಲ್ಲಿ ಗುರುಪೂರ್ಣಿಮೆ ಮಹೋತ್ಸವವನ್ನು ಭಕ್ತಿ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವ್ಯಾಸ ಗುರುಪೂರ್ಣಿಮೆ ಸಮಾರಂಭ ಹಾಗೂ ಸಂಗೀತ ಕಾರ್ಯಕ್ರಮಗಳು ವಿಶೇಷ ಆಕರ್ಷಣೆಯಾಗಿದ್ದವು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಖ್ಯಾತ ಸಾಹಿತಿ ಡಾ. ಎಂ.ಜಿ. ದೇಶಪಾಂಡೆ, “ಮಾನವನ ಬದುಕಿನಲ್ಲಿ ಗುರುವಿನ ಸ್ಥಾನ ಅತ್ಯಂತ ಶ್ರೇಷ್ಠವಾಗಿದೆ. ಗುರು ಇಲ್ಲದೆ ಯಾರೂ ಜ್ಞಾನಿಗಳಾಗಲು ಸಾಧ್ಯವಿಲ್ಲ. ತಾಯಿಯೇ ಮೊದಲ ಗುರುವಾಗಿದ್ದು, ಗುರುಗಳು ಮಾತೃಸ್ವರೂಪಿಗಳಾಗಿದ್ದಾರೆ. ಒಂದು ಅಕ್ಷರ ಕಲಿಸಿದವರೂ ಸಹ ಗುರುವಿನ ಸ್ಥಾನಕ್ಕೆ ಅರ್ಹರು” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಶ್ರೇಯಾ ಮಹೇಂದ್ರಕರ್, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಸಂಸ್ಕಾರ ಮತ್ತು ಮೌಲ್ಯ ಶಿಕ್ಷಣದ ಅಗತ್ಯವನ್ನು ಒತ್ತಿಹೇಳಿದರು. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಬೆಳೆಸುವುದು ಗುರುಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಹಿರೇಮಠ ಸಿದ್ದರಾಮಯ್ಯ ಮಾತನಾಡಿ, ಗುರುವಿನ ಮಾರ್ಗದರ್ಶನ ಜೀವನವನ್ನು ಸಾರ್ಥಕಗೊಳಿಸುತ್ತದೆ. ಶಾಂತಿ, ಯಶಸ್ಸು ಮತ್ತು ಸತ್ಪಥದಲ್ಲಿ ಸಾಗಲು ಗುರುಗಳ ಆರಾಧನೆ ಅಗತ್ಯ ಎಂದು ಹೇಳಿದರು.
ಅತಿಥಿಗಳಾದ ಅಂಕಿತಾ ಬಚ್ಚಣ್ಣ ಮಾತನಾಡಿ, ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಅವರಿಗೆ ಉತ್ತಮ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳನ್ನು ನೀಡಿದರೆ ಆದರ್ಶ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಅಂಬಿಕಾ ಕುಲಕರ್ಣಿ, ಜಗದೇವಿ ವಗದಾಳೆ, ವಿಜಯಲಕ್ಷ್ಮಿ ಸಿರಂಜೆ ಹಾಗೂ ಸುರೇಖಾ ಹತ್ತಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಅರುಣಾ ಬಚ್ಚಾ ಮತ್ತು ಕಾಂಚನ ಎರಮಳ್ಳಿ ಗುರು ಅಷ್ಟಕ ವಾಚನ ಮಾಡಿದರು. ಕಿರಣ ಮಹಾರಾಜರು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಕುಮಾರಿ ಆಸ್ತಾ ಅವರ ನೃತ್ಯ ಪ್ರದರ್ಶನ, ಮಂಜುಳಾ ಮಠ ಅವರ ಸ್ವಾಗತ ಗೀತೆ, ಪ್ರವೀಣ್ ಕುಮಾರ್ ಅವರ ಸ್ವಾಗತ ಭಾಷಣ, ಸತಿ ಅನುಸಯಾ ಕೋಲಾಟ ತಂಡದಿಂದ ಸುನೀತಾ ರಂಡಾಳೆ ನೇತೃತ್ವದಲ್ಲಿ ಕೋಲಾಟ ಪ್ರದರ್ಶನ ಹಾಗೂ ಶಿವಶಕ್ತಿ ಸತ್ಸಂಗ ಬಳಗದ ಭಜನೆಗಳು ವಿಶೇಷ ಆಕರ್ಷಣೆಯಾಗಿದ್ದವು. ಇದೇ ಸಂದರ್ಭದಲ್ಲಿ ಶಿವ ದೊಡ್ಡದೊಡ್ಡಿ ಅವರನ್ನು ಸನ್ಮಾನಿಸಲಾಯಿತು.
ಮಹೇಶ್ ಬಚ್ಚಣ್ಣ ಕಾರ್ಯಕ್ರಮ ನಿರೂಪಿಸಿದರು. ರೇವಣಪ್ಪ ಮೂಲಗೆ ಮತ್ತು ಪಾಂಡುರಂಗ ಅವರು ತಬಲಾ ಹಾಗೂ ಹಾರ್ಮೋನಿಯಂ ಸಹಕಾರ ನೀಡಿದರು. ಕಾರ್ಯಕ್ರಮದಲ್ಲಿ ರಮೇಶ್ ಇಟಗಿ, ಬಾಬುರಾವ್ ಗೊಂಡಾ, ಚಂದ್ರಕಾಂತ ಪೂಜಾರಿ, ವಿರೂಪಾಕ್ಷ ದೇವರು ಸೇರಿದಂತೆ ನೂರಾರು ಭಕ್ತರು, ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.



