ಶಾಶ್ವತ ನೀರಾವರಿಗಾಗಿ ರೈತರ ಸಂಘಟನೆಗೆ ಕರೆ: ಭೀಮಾ ಯೋಜನೆ ನೀರು ಬಿಡುಗಡೆಗೆ ಒತ್ತಾಯ
ಅಫಜಲಪುರದಲ್ಲಿ ರೈತರ ಸಭೆ; ಭೀಮಾ ಎತ್ತಿನ ನೀರಾವರಿ ಯೋಜನೆ ಪೂರ್ಣಗೊಳಿಸಿ 15 ಟಿಎಂಸಿ ನೀರು ಹರಿಸುವಂತೆ ಸರ್ಕಾರಕ್ಕೆ ಆಗ್ರಹ

ಅಫಜಲಪುರ, ಆ.3: ತಾಲ್ಲೂಕಿನಲ್ಲಿ ಸಮಗ್ರ ಹಾಗೂ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸಲು ರೈತರು ಸಂಘಟಿತರಾಗಿ ನಿರಂತರ ಹೋರಾಟ ನಡೆಸಬೇಕಿದೆ ಎಂದು ರೈತ ಮುಖಂಡ ಶ್ರೀಮಂತ ಬಿರಾದಾರ ಹೇಳಿದರು.
ಪಟ್ಟಣದ ಅಳ್ಳಗಿ ಕ್ರಾಸ್‌ನಲ್ಲಿರುವ ಸ್ಪೂರ್ತಿ ಕಾಲೇಜಿನಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಸಂಯೋಜನೆಯಲ್ಲಿ ನಡೆದ ಸಮಗ್ರ ಶಾಶ್ವತ ನೀರಾವರಿ ಹೋರಾಟ ಸಮಿತಿಯ ರೈತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅಫಜಲಪುರ ತಾಲ್ಲೂಕು ಪ್ರತಿವರ್ಷ ಬರಗಾಲದ ಸಂಕಷ್ಟ ಎದುರಿಸುತ್ತಿದೆ. ಸುಮಾರು 30 ವರ್ಷಗಳ ಹಿಂದೆ ಆರಂಭಗೊಂಡ ಭೀಮಾ ಎತ್ತಿನ ನೀರಾವರಿ ಯೋಜನೆಯ ನೀರು ಇನ್ನೂ ರೈತರ ಜಮೀನುಗಳಿಗೆ ತಲುಪಿಲ್ಲ. ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಸಮರ್ಪಕ ಪರಿಹಾರವೂ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಹಾರಾಷ್ಟ್ರದ ಉಜ್ಜನಿ ಜಲಾಶಯದಿಂದ ಬಚಾವತ್ ತೀರ್ಪಿನ ಅನ್ವಯ ಭೀಮಾ ನದಿಗೆ 15 ಟಿಎಂಸಿ ನೀರು ಹರಿಸುವಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ರೈತ ಮುಖಂಡ ಗುರು ಚಾಂದಕವಟೆ ಮಾತನಾಡಿ, ತಾಲ್ಲೂಕಿನ ಕೆರೆಗಳನ್ನು ಹೂಳೆತ್ತಿ ನೀರು ಸಂಗ್ರಹಿಸುವ ವ್ಯವಸ್ಥೆ ಕಲ್ಪಿಸಬೇಕು. ಶಾಶ್ವತ ನೀರಾವರಿಯೇ ರೈತರ ಬದುಕಿಗೆ ಶಾಶ್ವತ ಪರಿಹಾರವಾಗಿದ್ದು, ಈ ಕುರಿತು ಜನಾಂದೋಲನ ರೂಪಿಸುವ ಅಗತ್ಯವಿದೆ ಎಂದರು.
ನಾಮದೇವ ಕಟಕೋಳ ಹಾಗೂ ಭೀಮರಾಯ ಗೌರ ಮಾತನಾಡಿ, ರೈತರ ಸಮಸ್ಯೆಗಳ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಸಮಗ್ರ ನೀರಾವರಿ ಯೋಜನೆ ಜಾರಿಗೊಳಿಸಲು ಎಲ್ಲಾ ರೈತರು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಶಾಂತು ಅಂಜುಟಗಿ ಮಾತನಾಡಿ, ಭೀಮಾ ಎತ್ತಿನ ನೀರಾವರಿ ಯೋಜನೆ ಪೂರ್ಣಗೊಳಿಸುವುದು, ಬಚಾವತ್ ತೀರ್ಪಿನ ನೀರಿನ ಹಂಚಿಕೆ ಜಾರಿಗೊಳಿಸುವುದು ಹಾಗೂ ರೈತರ ಬೇಡಿಕೆಗಳನ್ನು ಈಡೇರಿಸುವವರೆಗೆ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಹೇಳಿದರು.
ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಿ, ಅಫಜಲಪುರ ತಾಲ್ಲೂಕಿನಲ್ಲಿ ಸಮಗ್ರ ಹಾಗೂ ಶಾಶ್ವತ ನೀರಾವರಿಗಾಗಿ ಹೋರಾಟ ಸಮಿತಿಯನ್ನು ಮತ್ತಷ್ಟು ಬಲಪಡಿಸುವ ನಿರ್ಧಾರ ಕೈಗೊಳ್ಳಲಾಯಿತು.
ಈ ವೇಳೆ ಅಫಜಲಪುರ ಶಾಶ್ವತ ನೀರಾವರಿ ಹೋರಾಟ ಸಮಿತಿ ರಚಿಸಲಾಯಿತು. ಭೀಮರಾವ್ ಗೌರ ಅವರನ್ನು ಗೌರವಾಧ್ಯಕ್ಷರಾಗಿ, ರಮೇಶ್ ಪಾಟೀಲ್ ಅವರನ್ನು ಅಧ್ಯಕ್ಷರಾಗಿ, ಶ್ರೀಮಂತ ಬಿರಾದಾರ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಮುರುಗೇಂದ್ರ ಮಸಳಿ ಅವರನ್ನು ಖಜಾಂಚಿಯಾಗಿ ಆಯ್ಕೆ ಮಾಡಲಾಯಿತು. ಜೊತೆಗೆ 51 ಸದಸ್ಯರ ಸಮಿತಿಯನ್ನೂ ರಚಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ನೂರುಅಹ್ಮದ್ ಭಾಗವಾನ್ ವಹಿಸಿದ್ದರು. ಕಾರ್ಯಕ್ರಮವನ್ನು ಶಿವಶರಣಪ್ಪ ಬುಜರಿ ಉದ್ಘಾಟಿಸಿದರು.
ಸಭೆಯಲ್ಲಿ ಬಸವರಾಜ ಘಾಣೂರ, ರಮೇಶ್ ಶೆಟ್ಟಿ, ನೂರುಅಹ್ಮದ್ ಬಾಗವಾನ, ಚಂದು ಕರಜಗಿ, ಲತೀಫ್ ಪಟೇಲ್, ಬಸಯ್ಯ ಆಕಾಶಮಠ, ಬಸವರಾಜ ಶಿರ, ಆನಂದ ಪಾಟೀಲ್, ರಮೇಶ್ ಪಾಟೀಲ್, ಅಣ್ಣಾರಾವ್ ಪಾಟೀಲ್, ಯಶವಂತ ಪಟ್ಟೇದಾರ, ಮಹಿಬೂಬ್ ನದಾಫ್, ಬಸವರಾಜ ವಾಳಿ, ಗುರುದತ್ತ ಪೂಜಾರಿ, ಕೆ.ಜಿ. ಪೂಜಾರಿ, ಚಂದು ಬನ್ನೆಟ್ಟಿ, ಶಿವಪುತ್ರಪ್ಪ ಬುರಳಿ, ದೌಲತಗೌಡ ಪಾಟೀಲ್, ಶಾಂತಮಲ್ಲಪ್ಪ ಹೊನುಂಗರ್, ಶಿವಾನಂದ ಹೊಟ್ಕರ್ ಸೇರಿದಂತೆ ಅನೇಕ ರೈತ ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು.



