ಟಿಕೋಟಾದ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಅವ್ಯವಸ್ಥೆ ಆರೋಪ; ಸಮಗ್ರ ತನಿಖೆಗೆ ಆಗ್ರಹ
ಪ್ರಶ್ನೆಪತ್ರಿಕೆ ವಿತರಣೆ ವಿಳಂಬ, ಓಎಂಆರ್ ಶೀಟ್ ಗೊಂದಲಕ್ಕೆ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಖಂಡನೆ

ಕಲಬುರಗಿ, ಆ.2: ವಿಜಯಪುರ ಜಿಲ್ಲೆಯ ಟಿಕೋಟಾದಲ್ಲಿರುವ ಪೊಲೀಸ್ ನೇಮಕಾತಿ ಲಿಖಿತ ಪರೀಕ್ಷಾ ಕೇಂದ್ರದಲ್ಲಿ ಉಂಟಾದ ಅವ್ಯವಸ್ಥೆ, ಪ್ರಶ್ನೆಪತ್ರಿಕೆ ವಿತರಣೆಯಲ್ಲಿನ ವಿಳಂಬ ಹಾಗೂ ಓಎಂಆರ್ ಉತ್ತರ ಪತ್ರಿಕೆಗಳ ಗೊಂದಲವನ್ನು ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಸಮಿತಿಯ ಜಿಲ್ಲಾ ಸಂಚಾಲಕ ರಮೇಶ್ ದೇವಕರ ಅವರು ಪ್ರಕಟಣೆ ನೀಡಿ, ವಿಜಯಪುರ ಜಿಲ್ಲೆಯ ಟಿಕೋಟಾದ ಶಾರದಾಂಬ ಶಿಕ್ಷಣ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆಪತ್ರಿಕೆ ಹಾಗೂ ಓಎಂಆರ್ ಉತ್ತರ ಪತ್ರಿಕೆಗಳನ್ನು ನಿಗದಿತ ಸಮಯಕ್ಕೆ ವಿತರಿಸದೆ ವಿಳಂಬ ಮಾಡಲಾಗಿದೆ ಎಂದು ಆರೋಪಿಸಿದರು. ಅಲ್ಲದೆ, ಪ್ರಶ್ನೆಪತ್ರಿಕೆ ಮತ್ತು ಓಎಂಆರ್ ಶೀಟ್‌ಗಳ ಸಂಖ್ಯೆಯಲ್ಲಿ ಹೊಂದಾಣಿಕೆ ಇಲ್ಲದಿರುವುದು ಅಭ್ಯರ್ಥಿಗಳಲ್ಲಿ ಆತಂಕ ಉಂಟುಮಾಡಿದ್ದು, ಪರೀಕ್ಷಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯ ಮೇಲೆಯೂ ಪ್ರಶ್ನೆಗಳನ್ನು ಎಬ್ಬಿಸಿದೆ ಎಂದು ಹೇಳಿದರು.
ಈ ಅವ್ಯವಸ್ಥೆಯಿಂದ ಅಸಮಾಧಾನಗೊಂಡ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಹೊರಗೆ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಬೇಕಾದ ಸಂದರ್ಭದಲ್ಲಿ ಇಂತಹ ಗೊಂದಲಗಳು ಅಭ್ಯರ್ಥಿಗಳಿಗೆ ಅನ್ಯಾಯವಾಗುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟರು.
ರಾಜ್ಯ ಸರ್ಕಾರವು ಈ ಘಟನೆ ಕುರಿತು ತಕ್ಷಣವೇ ಸಮಗ್ರ ತನಿಖೆ ನಡೆಸಿ, ವಿಳಂಬ ಹಾಗೂ ಗೊಂದಲಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಒತ್ತಾಯಿಸಿದೆ. ಜೊತೆಗೆ, ಯಾವುದೇ ಅಭ್ಯರ್ಥಿಗೆ ಅನ್ಯಾಯವಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಂಡು ಪರೀಕ್ಷಾ ಪ್ರಕ್ರಿಯೆಯ ಮೇಲಿನ ವಿಶ್ವಾಸವನ್ನು ಉಳಿಸಬೇಕು ಎಂದು ಆಗ್ರಹಿಸಿದೆ.



