ಸಮಾಜ

ಅಣ್ಣಾಭಾವು ಸಾಠೆ ಸಾಹಿತ್ಯ ಜನಪರ ಹೋರಾಟದ ಪ್ರತೀಕ: ಬಾಬುರಾವ್ ಹೊನ್ನಾ

ಬೀದರ್‌ನಲ್ಲಿ 106ನೇ ಜನ್ಮದಿನ ಅಂಗವಾಗಿ ದ್ವಿತೀಯ ಸಾಹಿತ್ಯ ಸಮ್ಮೇಳನ; ಸಮಾನತೆ ಮತ್ತು ಕಾರ್ಮಿಕರ ಹಕ್ಕುಗಳ ಸಂದೇಶಕ್ಕೆ ಒತ್ತು

ಬೀದರ್, ಆ.2: ಅಣ್ಣಾಭಾವು ಸಾಠೆ ಅವರು ಮಹಾರಾಷ್ಟ್ರದಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷದ ಮೂಲಕ ಜನಪರ ಚಳವಳಿಗಳನ್ನು ಸಂಘಟಿಸಿ, ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಮಹಾನ್ ನಾಯಕರಾಗಿದ್ದರು ಎಂದು ನ್ಯಾಯವಾದಿ ಬಾಬುರಾವ್ ಹೊನ್ನಾ ಹೇಳಿದರು.

ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಜಿಲ್ಲಾ ಮಂಡಳಿಯ ವತಿಯಿಂದ ಅಣ್ಣಾಭಾವು ಸಾಠೆ ಅವರ 106ನೇ ಜನ್ಮದಿನದ ಅಂಗವಾಗಿ ಶನಿವಾರ ನಗರದ ಸ್ಟಾರ್ ಲಾಡ್ಜ್ ಸಭಾಂಗಣದಲ್ಲಿ ಆಯೋಜಿಸಿದ್ದ ದ್ವಿತೀಯ ಸಾಹಿತ್ಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕಾರ್ಮಿಕರ ಶ್ರಮವೇ ಜಗತ್ತಿನ ಅಭಿವೃದ್ಧಿಗೆ ಮೂಲ ಎಂಬ ಅಣ್ಣಾಭಾವು ಸಾಠೆ ಅವರ ವಿಚಾರಧಾರೆ ಇಂದಿಗೂ ಪ್ರಸ್ತುತವಾಗಿದೆ ಎಂದರು.

ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದ ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಮಾರ್ಗವನ್ನು ಅನುಸರಿಸುವ ಸಂಕಲ್ಪವನ್ನು ಅಣ್ಣಾಭಾವು ಸಾಠೆ ಹೊಂದಿದ್ದರು. ಅವರ ಸಾಹಿತ್ಯವು ಶೋಷಿತ ವರ್ಗಗಳ ಬದುಕಿನ ನೈಜ ಚಿತ್ರಣವಾಗಿದ್ದು, ಸಮಾಜದಲ್ಲಿ ಜಾಗೃತಿ ಮೂಡಿಸುವ ಶಕ್ತಿಯನ್ನು ಹೊಂದಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ಕಿಸಾನ್ ಸಭಾದ ನಾಯಕ ಹಾಗೂ ಬಸವಕಲ್ಯಾಣದ ಸೂರ್ಯಕಾಂತ ಮದಕಟ್ಟಿ ವಹಿಸಿದ್ದರು. ಜಗದೀಶ್ ಬಿರಾದಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಣ್ಣಾಭಾವು ಸಾಠೆ ಅವರ ಸಾಹಿತ್ಯ ಶೋಷಿತ ಸಮುದಾಯಗಳ ನೋವು, ಹೋರಾಟ ಮತ್ತು ಬದುಕಿನ ಪ್ರತಿಬಿಂಬವಾಗಿದೆ ಎಂದರು. ಅವರ ಪ್ರಸಿದ್ಧ ‘ಫಕೀರಾ’ ಕಾದಂಬರಿಯು ಚಲನಚಿತ್ರ ರೂಪದಲ್ಲಿಯೂ ಜನಮನ ಗೆದ್ದಿದೆ ಎಂದು ತಿಳಿಸಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ನಜೀರ್ ಅಹ್ಮದ್ ಚೊಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಕಾರ್ಯದರ್ಶಿ ಶಫಾಯತ್ ಅಲಿ ವಂದಿಸಿದರು. ಸಮ್ಮೇಳನದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button