
ಕಲಬುರಗಿ, ಜು.31: ನಗರದ ಗಾಜೀಪುರದಲ್ಲಿರುವ ಶ್ರೀ 1008 ಆದಿನಾಥ ದಿಗಂಬರ ಜೈನ ಮಂದಿರದಲ್ಲಿ ಆಗಸ್ಟ್ 2ರಂದು ಮಂಗಳ ಕಲಶ ಸ್ಥಾಪನೆ ಹಾಗೂ ಚಾತುರ್ಮಾಸದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಜ್ಞಾನದಿವಾಕರ ಆಚಾರ್ಯ ಆರ್ಷಕೀರ್ತಿ ಮುನಿ ಮಹಾರಾಜರು ಹಾಗೂ ಕ್ಷುಲ್ಲಕ ಸುಪ್ರಭಸಾಗರ ಮಹಾರಾಜರು ಭಾಗವಹಿಸಲಿದ್ದು, ಭಕ್ತರ ಸಮ್ಮುಖದಲ್ಲಿ ವಿಶೇಷ ಪೂಜೆ, ಮಂಗಳ ಕಲಶ ಸ್ಥಾಪನೆ ಮತ್ತು ಧಾರ್ಮಿಕ ಪ್ರವಚನಗಳು ನಡೆಯಲಿವೆ ಎಂದು ತ್ಯಾಗಿ ಸೇವಾ ಸಮಿತಿ ಹಾಗೂ ಶ್ರೀ 1008 ಆದಿನಾಥ ದಿಗಂಬರ ಜೈನ ಮಂದಿರದ ಪದಾಧಿಕಾರಿಗಳು ತಿಳಿಸಿದ್ದಾರೆ.
ಆಗಸ್ಟ್ 2ರಂದು ಬೆಳಿಗ್ಗೆ 6.30ಕ್ಕೆ ದಿಗಂಬರ ಜೈನ ದೇವಸ್ಥಾನದಿಂದ ಕೋಠಾರಿ ಭವನದವರೆಗೆ ಮಂಗಳ ವಿಹಾರ, ಬೆಳಿಗ್ಗೆ 8.30ಕ್ಕೆ ಭಗವಂತನ ಅಭಿಷೇಕ, 9 ಗಂಟೆಗೆ ಕಲ್ಯಾಣ ಮಂದಿರ ವಿಧಾನ, ಮಧ್ಯಾಹ್ನ 12.30ಕ್ಕೆ ಚಾತುರ್ಮಾಸ ಮಂಗಳ ಕಲಶ ಸ್ಥಾಪನೆ ಹಾಗೂ ಸಂಜೆ 4ರಿಂದ 5 ಗಂಟೆಯವರೆಗೆ ಆಚಾರ್ಯರ ಧಾರ್ಮಿಕ ಪ್ರವಚನ ನಡೆಯಲಿದೆ.
ಸಂಜೆ 6 ಗಂಟೆಗೆ ಎಸ್.ಎಂ. ಪಂಡಿತ ರಂಗಮಂದಿರದಿಂದ ಗಾಜೀಪುರ ಜೈನ ಬಸದಿವರೆಗೆ ಭವ್ಯ ಮಂಗಳ ಕಲಶ ಯಾತ್ರೆ ಆಯೋಜಿಸಲಾಗಿದ್ದು, ಸಂಜೆ 7 ಗಂಟೆಗೆ ಮಂದಿರದಲ್ಲಿ ಮಂಗಳ ಕಲಶ ಸ್ಥಾಪನೆ ನೆರವೇರಲಿದೆ.
ಆಚಾರ್ಯ ಆರ್ಷಕೀರ್ತಿ ಮುನಿ ಮಹಾರಾಜರ ಜೀವನ ಪರಿಚಯವನ್ನೂ ಈ ಸಂದರ್ಭದಲ್ಲಿ ನೀಡಲಾಗಿದ್ದು, ಅವರು ಮಧ್ಯಪ್ರದೇಶದ ಸಾಗರ್ ಜಿಲ್ಲೆಯವರಾಗಿದ್ದು, ದೀರ್ಘಕಾಲದ ತಪಸ್ಸು, ಅಧ್ಯಾತ್ಮ ಹಾಗೂ ಜೈನ ಧರ್ಮ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ 700 ಕಿಲೋಮೀಟರ್‌ಗಳ ಪಾದಯಾತ್ರೆ ಪೂರ್ಣಗೊಳಿಸಿರುವುದು ವಿಶೇಷವೆಂದು ತಿಳಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಬಿ.ಕೆ. ಪಾಟೀಲ್, ಪ್ರಕಾಶ್ ಜೈನ್, ಅಂಕುಶ್ ಶಾಹ್, ನಾಗಣ್ಣ ಚಿಂತೆ, ರಮೇಶ್ ಗಡಗಡೆ, ದೀಪಕ್ ಪಂಡಿತ್, ವಜ್ರಕುಮಾರ್ ಮೆಹತಾ, ರತ್ನಚಂದ್ ಖಪ್ಪಣಕರ, ವಜ್ರಕುಮಾರ್ ಪಾಟೀಲ್, ರಾಹುಲ್ ಶಾಹ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



