ಕಲಬುರಗಿ, ಜು.30: ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ 371(ಜೆ) ವಿಧಿಯಡಿ ದೊರೆತಿರುವ ವಿಶೇಷ ಸ್ಥಾನಮಾನವನ್ನು ಪರಿಗಣಿಸಿ, ಈ ಭಾಗಕ್ಕೆ ಪ್ರತ್ಯೇಕ ರಣಜಿ ಕ್ರಿಕೆಟ್ ತಂಡ ರಚಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಬಿಸಿಸಿಐಗೆ ಶಿಫಾರಸು ಸಲ್ಲಿಸಬೇಕು ಎಂದು ಮಾಜಿ ಅಧ್ಯಕ್ಷ ಡಾ. ರಾಜಶೇಖರ ಪಾಟೀಲ್ ಕುಳಗೇರಿ ಆಗ್ರಹಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಕ್ರಿಕೆಟ್ ಆಟಗಾರರು, ತರಬೇತುದಾರರು ಹಾಗೂ ಆಡಳಿತ ಕ್ಷೇತ್ರದ ಪ್ರತಿನಿಧಿಗಳಿಗೆ ದೀರ್ಘಕಾಲದಿಂದ ಅನ್ಯಾಯವಾಗುತ್ತಿದ್ದು, ಈ ಪ್ರದೇಶದ ಪ್ರತಿಭಾವಂತರಿಗೆ ಸಮಾನ ಅವಕಾಶ ದೊರೆಯುತ್ತಿಲ್ಲ ಎಂದು ಆರೋಪಿಸಿದರು.
371(ಜೆ) ಅಡಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸಾಂವಿಧಾನಿಕ ಹಕ್ಕುಗಳಿರುವ ಹಿನ್ನೆಲೆಯಲ್ಲಿ, ಈ ಭಾಗಕ್ಕೆ ಪ್ರತ್ಯೇಕ ರಣಜಿ ತಂಡ ರಚಿಸುವ ಕುರಿತು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಬಿಸಿಸಿಐಗೆ ಶಿಫಾರಸು ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ವ್ಯಾಪ್ತಿಯ ಕ್ರಿಕೆಟ್ ಅಭಿವೃದ್ಧಿಗೆ ಅಗತ್ಯ ಅನುದಾನ, ಮೂಲಸೌಕರ್ಯ ಹಾಗೂ ಆಡಳಿತಾತ್ಮಕ ಪ್ರಾತಿನಿಧ್ಯ ಸಮರ್ಪಕವಾಗಿ ದೊರೆಯುತ್ತಿಲ್ಲ. ರಾಜ್ಯದ ಇತರೆ ಭಾಗಗಳಿಗೆ ಹೋಲಿಸಿದರೆ ಈ ಭಾಗದ ಕ್ರಿಕೆಟ್ ಅಭಿವೃದ್ಧಿ ಹಲವು ವರ್ಷಗಳಿಂದ ಹಿಂದುಳಿದಿದೆ ಎಂದು ಅವರು ಹೇಳಿದರು.
ಸಂವಿಧಾನದ 371(ಜೆ) ವಿಶೇಷ ಸ್ಥಾನಮಾನ ಹಾಗೂ ಸುಪ್ರೀಂ ಕೋರ್ಟ್‌ನ ಕೆಲವು ತೀರ್ಪುಗಳನ್ನು ಉಲ್ಲೇಖಿಸಿದ ಅವರು, ಪ್ರಾದೇಶಿಕ ಸಮಾನತೆ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಕ್ರಿಕೆಟ್ ಘಟಕ ಅಥವಾ ರಣಜಿ ತಂಡ ನೀಡಲು ಯಾವುದೇ ಅಡ್ಡಿಯಿಲ್ಲ ಎಂದು ಅಭಿಪ್ರಾಯಪಟ್ಟರು.
ಬಿಹಾರ-ಝಾರ್ಖಂಡ್ ರಾಜ್ಯ ವಿಭಜನೆಯ ನಂತರ ಪ್ರತ್ಯೇಕ ಕ್ರಿಕೆಟ್ ಸಂಸ್ಥೆಗಳಿಗೆ ಮಾನ್ಯತೆ ನೀಡಿದ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ಇದೇ ಮಾದರಿಯಲ್ಲಿ ಕಲ್ಯಾಣ ಕರ್ನಾಟಕಕ್ಕೂ ಅವಕಾಶ ಕಲ್ಪಿಸಬಹುದು ಎಂದು ಹೇಳಿದರು.
ರಾಯಚೂರು, ಕಲಬುರಗಿ ಸೇರಿದಂತೆ ಈ ಭಾಗದ ಕ್ರೀಡಾಂಗಣಗಳ ಅಭಿವೃದ್ಧಿಗೆ ಅಗತ್ಯ ಕ್ರಮಗಳು ಕೈಗೊಳ್ಳಲಾಗಿಲ್ಲ. ಹಲವು ವರ್ಷಗಳಿಂದ ಸಂಗ್ರಹವಾಗಿರುವ ನಿಧಿಯನ್ನೂ ಸಮರ್ಪಕವಾಗಿ ಬಳಸಿಲ್ಲ ಎಂದು ಆರೋಪಿಸಿದ ಅವರು, ಮೂಲಸೌಕರ್ಯಗಳ ಕೊರತೆಯಿಂದ ಪ್ರತಿಭಾವಂತ ಆಟಗಾರರು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕದ ಯುವ ಕ್ರಿಕೆಟಿಗರಿಗೆ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ, ಈ ಭಾಗಕ್ಕೆ ಪ್ರತ್ಯೇಕ ರಣಜಿ ತಂಡ ರಚಿಸುವಂತೆ ರಾಜ್ಯ ಕ್ರಿಕೆಟ್ ಸಂಸ್ಥೆ ಹಾಗೂ ಬಿಸಿಸಿಐ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.



