
ಕಲಬುರಗಿ, ಜು.30: ಜಂಗಮ ಸಮಾಜದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ 85 ಶೇಕಡಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಗಸ್ಟ್ 2ರಂದು ಬೆಳಿಗ್ಗೆ 11 ಗಂಟೆಗೆ ನಗರದ ಪತ್ರಿಕಾ ಭವನದಲ್ಲಿ ‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಂಗಮ ಸಮಾಜ ಕ್ಷೇಮಾಭಿವೃದ್ಧಿ ಪರ ಸಂಘದ ಅಧ್ಯಕ್ಷ ಸತೀಶ್ ದಿಗ್ಗಾಂವಕರ (ಪಿಂಟು ಸ್ವಾಮಿ) ತಿಳಿಸಿದರು.
ಗುರುವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀನಿವಾಸ ಸರಡಗಿ ರೇವಣಸಿದ್ದ ಶಿವಾಚಾರ್ಯರು ವಹಿಸಲಿದ್ದಾರೆ. ರಾಜ್ಯ ವೈದ್ಯಕೀಯ ಶಿಕ್ಷಣ, ಕೌಶಲಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹಾಗೂ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಬಿ.ಆರ್. ಪಾಟೀಲ್, ಕನೀಜ್ ಫಾತಿಮಾ, ಎಂ.ವೈ. ಪಾಟೀಲ್, ಬಸವರಾಜ ಮತ್ತಿಮೂಡ, ಶಶೀಲ್ ಜಿ. ನವೋಶಿ, ಜಗದೇವ್ ಗುತ್ತೇದಾರ, ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷ ಡಾ. ಶರಣಕುಮಾರ ಮೋದಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂಖಾನ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ, ನಿವೃತ್ತ ಡಿಡಿಪಿಐ ಕೆ.ಎಸ್. ಹಿರೇಮಠ, ಹಿರಿಯ ನ್ಯಾಯವಾದಿ ಆರ್.ಕೆ. ಹಿರೇಮಠ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸಮಾಜ ಸೇವೆ, ಶಿಕ್ಷಣ, ಆರೋಗ್ಯ, ಕಾನೂನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು ಎಂದು ಸತೀಶ್ ದಿಗ್ಗಾಂವಕರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.



