ಬರಪೀಡಿತ ಪ್ರದೇಶ ಘೋಷಣೆಗೆ ಆಗ್ರಹ: ಜಿಲ್ಲಾಧಿಕಾರಿ ಕಚೇರಿಗೆ ಜೆಡಿಎಸ್ ಮುತ್ತಿಗೆ
ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ; ತಕ್ಷಣ ಬರ ಘೋಷಿಸಿ ಪರಿಹಾರ ನೀಡುವಂತೆ ಒತ್ತಾಯ

ಕಲಬುರಗಿ, ಸೆ.1- ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ ಜಾತ್ಯತೀತ ಜನತಾದಳದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತಿಮ್ಮಾಪುರ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಜೆಡಿಎಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ರಾಜಕುಮಾರ್ ಬಡದಾಳ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದೆ ಕೃಷಿ ಚಟುವಟಿಕೆಗಳು ತೀವ್ರವಾಗಿ ಹಿನ್ನಡೆ ಕಂಡಿವೆ. ರೈತರು ಬೆಳೆ ನಷ್ಟ, ಆರ್ಥಿಕ ಸಂಕಷ್ಟ ಹಾಗೂ ಮುಂದಿನ ಕೃಷಿ ಚಟುವಟಿಕೆಗಳ ಕುರಿತು ಆತಂಕದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿಯೂ ರಾಜ್ಯ ಸರ್ಕಾರ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈಗಾಗಲೇ ರೈತ ಸಂಘಟನೆಗಳು ಹಾಗೂ ಜೆಡಿಎಸ್ ಪಕ್ಷದ ವತಿಯಿಂದ ಕಳೆದ ಎರಡು ತಿಂಗಳಿಂದ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ನಿರಂತರವಾಗಿ ಮನವಿ ಸಲ್ಲಿಸಲಾಗುತ್ತಿದೆ. ಆದರೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲೆಯನ್ನು ಹಿಂದುಳಿದ ಪ್ರದೇಶವೆಂದು ಘೋಷಿಸಿ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದ್ದರೂ ಇಲ್ಲಿನ ರೈತರ ಸಂಕಷ್ಟದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ರೈತರೊಬ್ಬರ ಕಣ್ಣಿಗೆ ಬೆಣ್ಣೆ, ಮತ್ತೊಬ್ಬ ರೈತನ ಕಣ್ಣಿಗೆ ಸುಣ್ಣ ಹಚ್ಚಿದಂತೆ ಸರ್ಕಾರದ ನೀತಿಗಳು ಪರಿಣಾಮ ಬೀರುತ್ತಿವೆ ಎಂದು ಟೀಕಿಸಿದ ಪ್ರತಿಭಟನಾಕಾರರು, ಬೆಳೆ ವಿಮೆ ಯೋಜನೆಯಲ್ಲಿಯೂ ರೈತರಿಗೆ ತಾರತಮ್ಯವಾಗುತ್ತಿದೆ ಎಂದು ಆರೋಪಿಸಿದರು.
ಜಿಲ್ಲೆಯ ಮೂವರು ಸಚಿವರು ಹಾಗೂ ಶಾಸಕರು ರೈತರ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯಬೇಕಾಗಿದ್ದರೂ ಈ ವಿಚಾರದಲ್ಲಿ ಮೌನ ವಹಿಸಿದ್ದಾರೆ. ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಾಗಿತ್ತು. ಆದರೆ ಈವರೆಗೆ ನಿರೀಕ್ಷಿತ ಮಟ್ಟದಲ್ಲಿ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರಿ ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಬೆಳೆ ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಬೆಳೆ ವಿಮೆ ಪರಿಹಾರದಲ್ಲಿನ ತಾರತಮ್ಯವನ್ನು ನಿವಾರಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಬಸವರಾಜ ಬಿರಬಟ್ಟಿ, ಪ್ರವೀಣ್ ಜಾಧವ್, ಸುನೀಲ್ ಹೊಸಮನಿ, ಬೈಲಪ್ಪ ಪಟ್ಟೇದಾರ, ಮಹಾಂತಪ್ಪ ಮದರ, ವಾರದ ನಾಗಣ್ಣ, ನಾಗಯ್ಯಸ್ವಾಮಿ, ಸುರೇಶ್ ಮಹಾಗಾಂವಕರ್, ರಾಮಚಂದ್ರ ಅಟೂರ್, ಮಹಾನಂದ ಪಡಶೆಟ್ಟಿ, ಮಹಾದೇವಿ ಪೂಜಾರಿ, ಮಾರುತಿ ಚವ್ಹಾಣ, ಶಿವಲಿಂಗ ಪಾಟೀಲ್, ಬಾಬರ್ ಮುಸ್ತಾಕ್, ಚಂದ್ರಕಾಂತ ಮೋರೆ, ದೇವೇಂದ್ರ ಹಸನಾಪುರ, ಗಂಗಾಧರ ಪಂಚಾಳ, ಚಂದ್ರಕಲಾ ವಾಡಿ, ನಿಂಗಣ್ಣ, ಶಿವಾನಂದ ಬಡದಾಳ್, ಶಿವಕುಮಾರ್ ಬಡದಾಳ್, ಸಿದ್ರಾಮಪ್ಪ ಹುಲೂರು ಸೇರಿದಂತೆ ಹಲವರು ಭಾಗವಹಿಸಿದ್ದರು.



