ಅಪರಾಧ

ಅನೈತಿಕ ಸಂಬಂಧದ ಹಿನ್ನೆಲೆ ಕೊಲೆ: ಆರೋಪಿಗೆ ಜೀವಾವಧಿ ಶಿಕ್ಷೆ

2024ರ ಹೊನ್ನಕಿರಣಗಿ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ, ₹25 ಸಾವಿರ ದಂಡ

ಕಲಬುರಗಿ, ಜು.29: ಜಿಲ್ಲೆಯ ಹೊನ್ನಕಿರಣಗಿ ಗ್ರಾಮದಲ್ಲಿ 2024ರ ಏಪ್ರಿಲ್ 17ರಂದು ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಕಲಬುರಗಿಯ ಮೊದಲನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿದೆ.

ಹೊನ್ನಕಿರಣಗಿ ಗ್ರಾಮದ ನಾಗಯ್ಯ ತಂದೆ ಶಿವಲಿಂಗಯ್ಯಸ್ವಾಮಿ ಎಂಬಾತನಿಗೆ ನ್ಯಾಯಾಧೀಶ ಎ.ವಿ. ಶ್ರೀನಾಥ್ ಅವರು ಜೀವಾವಧಿ ಶಿಕ್ಷೆ ವಿಧಿಸಿ, ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿಯಾಗಿ ಆರು ತಿಂಗಳ ಸಾದಾ ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದ್ದಾರೆ. ಅಲ್ಲದೆ ಮೃತನ ತಾಯಿ ಹಾಗೂ ಪತ್ನಿಗೆ ಪರಿಹಾರ ದೊರಕುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲು ನಿರ್ದೇಶನ ನೀಡಿದ್ದಾರೆ.

ಪ್ರಕರಣದ ವಿವರಗಳ ಪ್ರಕಾರ, ಆರೋಪಿಗೆ ಮೃತ ಈರಣ್ಣನ ಪತ್ನಿಯೊಂದಿಗೆ ಅನೈತಿಕ ಸಂಬಂಧವಿದ್ದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವೈಷಮ್ಯ ಉಂಟಾಗಿತ್ತು. ಇದೇ ದ್ವೇಷದ ಹಿನ್ನೆಲೆ 2024ರ ಏಪ್ರಿಲ್ 17ರಂದು ಬೆಳಿಗ್ಗೆ ಗ್ರಾಮದ ಹೊರವಲಯದ ಬಳಿ ಈರಣ್ಣನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು.

ಈ ಸಂಬಂಧ ಮೃತನ ತಾಯಿ ಗೋದುಬಾಯಿ ನೀಡಿದ ದೂರಿನ ಮೇರೆಗೆ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಪೂರ್ಣಗೊಳಿಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಸ್.ಆರ್. ನರಸಿಂಹಲು ವಾದ ಮಂಡಿಸಿದ್ದು, ತನಿಖಾಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯದ ಮುಂದೆ ಮಂಡಿಸಿದ್ದರು. ವಿಚಾರಣೆ ಪೂರ್ಣಗೊಂಡ ಬಳಿಕ ನ್ಯಾಯಾಲಯ ಆರೋಪಿಯನ್ನು ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.

Related Articles

Leave a Reply

Your email address will not be published. Required fields are marked *

Back to top button