ಸಮಾಜ

ವಿದ್ಯಾನಗರದಲ್ಲಿ ಕಾರ್ಗಿಲ್ ವಿಜಯೋತ್ಸವ: ವೀರ ಯೋಧರ ತ್ಯಾಗಕ್ಕೆ ಗೌರವ ನಮನ

27ನೇ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಮಾಜಿ ಸೈನಿಕರ ಸನ್ಮಾನ; ದೇಶಭಕ್ತಿಯ ಸಂದೇಶ ಸಾರಿದ ಕಾರ್ಯಕ್ರಮ

ಕಲಬುರಗಿ, ಜು.27: ಕಾರ್ಗಿಲ್ ಯುದ್ಧವು ಭಾರತೀಯ ಸೈನಿಕರ ಅಪ್ರತಿಮ ಶೌರ್ಯ, ತ್ಯಾಗ ಮತ್ತು ದೇಶಭಕ್ತಿಯ ಪ್ರತೀಕವಾಗಿದ್ದು, ಅತ್ಯಂತ ಪ್ರತಿಕೂಲ ಹವಾಮಾನ ಹಾಗೂ ದುರ್ಗಮ ಪರ್ವತ ಪ್ರದೇಶದಲ್ಲಿಯೂ ಶತ್ರುಗಳನ್ನು ಮಣಿಸಿ ವಿಶ್ವಕ್ಕೆ ಭಾರತದ ಸೇನೆಯ ಸಾಮರ್ಥ್ಯವನ್ನು ತೋರಿಸಿಕೊಟ್ಟ ಐತಿಹಾಸಿಕ ವಿಜಯವಾಗಿದೆ ಎಂದು ಮಾಜಿ ಸೈನಿಕ ರೇವಣಸಿದ್ದಪ್ಪ ಜೀವನಗಿ ಹೇಳಿದರು.

ನಗರದ ಬಸವೇಶ್ವರ ಆಸ್ಪತ್ರೆ ಎದುರಿನ ವಿದ್ಯಾನಗರ ಕಾಲೋನಿಯ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ವಿದ್ಯಾನಗರ ವೆಲ್‌ಫೇರ್ ಸೊಸೈಟಿ ವತಿಯಿಂದ ಆಯೋಜಿಸಿದ್ದ 27ನೇ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಾಕಿಸ್ತಾನದ ಒಳನುಸುಳುವಿಕೆಗೆ ಭಾರತೀಯ ಸೇನೆ ಧೈರ್ಯದಿಂದ ತಕ್ಕ ಉತ್ತರ ನೀಡಿ, ಸುಮಾರು 18 ಸಾವಿರ ಅಡಿ ಎತ್ತರದ ಹಿಮಾಚ್ಛಾದಿತ ಪ್ರದೇಶದಲ್ಲಿಯೂ ಅಸಾಧಾರಣ ಸಾಹಸ ಪ್ರದರ್ಶಿಸಿ ಕಾರ್ಗಿಲ್ ಯುದ್ಧದಲ್ಲಿ ವಿಜಯ ಸಾಧಿಸಿತು. ಆ ವಿಜಯ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸ್ಫೂರ್ತಿಯಾಗಿದ್ದು, ಸೈನಿಕರ ತ್ಯಾಗವನ್ನು ಸದಾ ಸ್ಮರಿಸಬೇಕು ಎಂದು ಅವರು ಹೇಳಿದರು.

ಮಾಜಿ ಸೈನಿಕ ಶಾಂತಯ್ಯ ಸಂದಿಮಠ ಮಾತನಾಡಿ, ಕಾರ್ಗಿಲ್ ವಿಜಯೋತ್ಸವವು ಕೇವಲ ಒಂದು ದಿನದ ಆಚರಣೆಯಲ್ಲ, ದೇಶದ ಭದ್ರತೆಗಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಶೌರ್ಯವನ್ನು ನೆನಪಿಸಿಕೊಳ್ಳುವ ಪವಿತ್ರ ದಿನವಾಗಿದೆ ಎಂದರು. ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆ ಶತ್ರುಗಳನ್ನು ಹಿಮ್ಮೆಟ್ಟಿಸಿ ರಾಷ್ಟ್ರದ ಗೌರವವನ್ನು ಎತ್ತಿಹಿಡಿದ ಕ್ಷಣವನ್ನು ದೇಶ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೂವರು ಮಾಜಿ ಸೈನಿಕರನ್ನು ರಾಷ್ಟ್ರಧ್ವಜ ನೀಡಿ ಸನ್ಮಾನಿಸಲಾಯಿತು. ದೇಶದ ರಕ್ಷಣೆಗೆ ತಮ್ಮ ಜೀವನವನ್ನು ಸಮರ್ಪಿಸಿದ ಸೈನಿಕರ ತ್ಯಾಗ ಮತ್ತು ಸೇವೆಯನ್ನು ಸ್ಮರಿಸಿ ಎಲ್ಲರೂ ಗೌರವ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ವೆಲ್‌ಫೇರ್ ಸೊಸೈಟಿಯ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಕಾರ್ಯದರ್ಶಿ ಶಿವರಾಜ ಅಂಡಗಿ, ಖಜಾಂಚಿ ಗುರುಲಿಂಗಯ್ಯ ಮಠಪತಿ, ಮಾಜಿ ಸೈನಿಕರಾದ ಆದಪ್ಪ ಸಿಕೇದ್, ಬಿ.ಎನ್. ಪುಣ್ಯಶೆಟ್ಟಿ, ಕಾಶಿನಾಥ ಚಿನಮಳ್ಳಿ, ಸುಭಾಷ್ ಮಂಟಾಳೆ, ನಾಗರಾಜ ಹೆಬ್ಬಾಳ, ಸದಾಶಿವ ಕಂಟ, ಶ್ರೀಮಂತರಾವ್ ರಾಜಾಪುರ, ಶಾಂತಯ್ಯ ಬೀದಿಮನಿ, ಬಸವಂತರಾವ್ ಜಾಬಶೆಟ್ಟಿ, ಆದಿಲಿಂಗಯ್ಯ ಕುಡಹಳ್ಳಿ, ಸಂಗಮೇಶ್ ದಿವಟಗಿ, ನಾಗಭೂಷಣ ಹಿಂಡೋಡ್ಡಿ, ನಾಗರಾಜ ಮುಗಳಿ, ವೀರೇಶಕುಮಾರ ನಾಗಶೆಟ್ಟಿ, ಉದಯಕುಮಾರ ಪಡಶೆಟ್ಟಿ, ರಮೇಶ್ ದಸ್ಮಾ, ಮಲ್ಲಿಕಾರ್ಜುನ ಸಿಂದಗಿ, ತರುಣಶೇಖರ ಬಿರಾದಾರ್, ಉಮೇಶ್ ಶೆಟ್ಟಿ, ಶರಣಯ್ಯಸ್ವಾಮಿ ಮಠಪತಿ ಸೇರಿದಂತೆ ಅನೇಕ ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button