ಕಲ್ಯಾಣ ನಾಡಿನ ಕಲಾ ಪರಂಪರೆ ವಿಶ್ವವಿಖ್ಯಾತ: ಶಿಲ್ಪಕಲೆಗೆ ಅಪಾರ ಕೊಡುಗೆ ನೀಡಿದ ನೆಲ
ಶಿಲ್ಪಕಲೆ ಪ್ರದರ್ಶನದಲ್ಲಿ ಡಾ. ಶಿವಾನಂದ ಬಂಟನೂರು ಅಭಿಮತ; ಯುವ ಕಲಾವಿದರಿಗೆ ಸೃಜನಶೀಲತೆಯೊಂದಿಗೆ ಮುನ್ನಡೆಯಲು ಕರೆ

ಕಲಬುರಗಿ, ಜು.27: ಕಲ್ಯಾಣ ಕರ್ನಾಟಕದ ಶಿಲ್ಪಕಲೆ ಭಾರತೀಯ ಸಾಂಪ್ರದಾಯಿಕ ಶಿಲ್ಪಕಲೆಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದು, ಹಂಪಿ, ಆನೆಗುಂಡಿ, ಸನ್ನತಿ, ಕಾಳಗಿ ಹಾಗೂ ಜಲಸಂಗವಿ ಮೊದಲಾದ ಪ್ರದೇಶಗಳ ಶಿಲ್ಪಕಲೆಗಳು ವಿಶ್ವದ ಗಮನ ಸೆಳೆದಿವೆ ಎಂದು ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶಿವಾನಂದ ಬಂಟನೂರು ಹೇಳಿದರು.
ನಗರದ ದಿ ಆರ್ಟ್ ಇಂಟಿಗ್ರೇಷನ್ ಚಿತ್ರಕಲಾ ಮಹಾವಿದ್ಯಾಲಯದ ಅಂಕುರ ಕಲಾ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಯಾದಗಿರಿಯ ಶಿಲ್ಪಕಲಾವಿದ ಹನುಮಂತ ಬಾಡದ ಅವರ ಏಕವ್ಯಕ್ತಿ ಶಿಲ್ಪಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಭಾಗದಲ್ಲಿ ಚಿತ್ರ ಹಾಗೂ ಶಿಲ್ಪಕಲೆಗೆ ಶ್ರೀಮಂತ ಪರಂಪರೆ ಇದ್ದು, ಧನಂಜಯ ಶಿಲ್ಪಿ, ನಾಡೋಜ ನಾಗಣ್ಣ ಬಡಿಗೇರ್, ಶಾಂತಲಿಂಗಪ್ಪ ಪಾಟೀಲ್, ಶಂಕರರಾವ್ ಆಳಂದಕರ್, ಎಸ್.ಎಂ. ಪಂಡಿತ್ ಸೇರಿದಂತೆ ಅನೇಕ ಕಲಾವಿದರು ದೃಶ್ಯಕಲೆ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಇಂದಿನ ಯುವ ಕಲಾವಿದರೂ ಸೃಜನಶೀಲತೆಯಿಂದ ಉತ್ತಮ ಕಲಾಕೃತಿಗಳನ್ನು ಸೃಷ್ಟಿಸುತ್ತಿದ್ದು, ಹನುಮಂತ ಬಾಡದ ಅವರ ಶಿಲ್ಪಗಳು ವಿಶಿಷ್ಟ ಕಲಾತ್ಮಕತೆಯನ್ನು ಹೊಂದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಯಾದಗಿರಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಉತ್ತರದೇವಿ ಮಾತನಾಡಿ, ಕಲಾವಿದರ ಮನಸ್ಸು ವಿಶಾಲವಾಗಿದ್ದು, ಸೀಮಿತ ಆರ್ಥಿಕ ನೆರವಿನ ನಡುವೆಯೂ ತಮ್ಮ ಸ್ವಂತ ವೆಚ್ಚದಲ್ಲಿ ಕಲಾ ಪ್ರದರ್ಶನಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇಲಾಖೆಯಿಂದ ಇನ್ನಷ್ಟು ಪ್ರೋತ್ಸಾಹ ನೀಡಲು ಪ್ರಯತ್ನಿಸಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಿ ಆರ್ಟ್ ಇಂಟಿಗ್ರೇಷನ್ ಚಿತ್ರಕಲಾ ಮಹಾವಿದ್ಯಾಲಯದ ಎಂ.ಎಚ್. ಬೆಳಮಗಿ ಮಾತನಾಡಿ, ಕಲಾವಿದರು ಸ್ವತಂತ್ರ ಚಿಂತನೆಯೊಂದಿಗೆ ಕಲಾಕೃತಿಗಳನ್ನು ರಚಿಸಬೇಕು. ವಿಶೇಷವಾಗಿ ವಿದ್ಯಾರ್ಥಿಗಳು ಹಿರಿಯ ಕಲಾವಿದರ ಅನುಭವಗಳನ್ನು ಅಳವಡಿಸಿಕೊಂಡು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ಆರಂಭದಲ್ಲಿ ಶಿಲ್ಪಕಲಾವಿದ ಹಾಗೂ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸದಸ್ಯ ಹನುಮಂತ ಬಾಡದ ಸ್ವಾಗತಿಸಿ, ಪ್ರದರ್ಶನದ ಉದ್ದೇಶವನ್ನು ವಿವರಿಸಿದರು. ಕಲಾವಿದ ಬಿ.ಎನ್. ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಕಮಾಜಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬಾಬುರಾವ್ ಎಚ್., ಅಶೋಕ್ ಶೆಟ್ಕಾರ್, ನಿಂಗಣ್ಣ ಡಿ. ಕೇರಿ, ಸಂಗಯ್ಯ ಹಳ್ಳದಮಠ, ಶಿವಾನಂದ ಹಕೀಂ, ಡಾ. ಪರಶುರಾಮ್ ಪಿ., ದಾನಯ್ಯ ಚೌಕಿಮಠ, ಪ್ರಶಾಂತಕುಮಾರ್ ಜಿ., ಗೋಪಾಲ್ ಕೆ.ಪಿ., ಕವಿತಾ ಕಟ್ಟೆ, ವೆಂಕಟೇಶ್ ಪಾಟೀಲ್, ಜಲಜಾಕ್ಷಿ ಕುಲಕರ್ಣಿ, ಮೌನೇಶ್ ಬಡಿಗೇರ್ ಸೇರಿದಂತೆ ಅನೇಕ ಕಲಾವಿದರು, ವಿದ್ಯಾರ್ಥಿಗಳು ಹಾಗೂ ಕಲಾಭಿಮಾನಿಗಳು ಉಪಸ್ಥಿತರಿದ್ದರು.



