ಯಾನಾಗುಂದಿಯಲ್ಲಿ ಜು.29ರಂದು ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ 93ನೇ ಜನ್ಮದಿನೋತ್ಸವ ಹಾಗೂ ರಥೋತ್ಸವ
ಆಷಾಢ ಗುರುಪೌರ್ಣಿಮೆಯ ಅಂಗವಾಗಿ ವಿಶೇಷ ಪೂಜೆ, ಪಾದಪೂಜೆ ಮತ್ತು ರಥೋತ್ಸವ; ಲಕ್ಷಾಂತರ ಭಕ್ತರು ಭಾಗವಹಿಸುವ ನಿರೀಕ್ಷೆ.

ಕಲಬುರಗಿ, ಜು.25: ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಗ್ರಾಮದಲ್ಲಿ ಆಷಾಢ ಶುಕ್ಲ ಗುರುಪೌರ್ಣಿಮೆಯ ಅಂಗವಾಗಿ ಜುಲೈ 29ರಂದು ಶ್ರೀ ಮಾತಾ ಮಾಣಿಕೇಶ್ವರಿ (ಮಾತಾಜಿ) ಅಮ್ಮನವರ 93ನೇ ಜನ್ಮದಿನೋತ್ಸವ ಹಾಗೂ ಭವ್ಯ ರಥೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಶ್ರೀ ಮಾತಾ ಮಾಣಿಕೇಶ್ವರಿ ಆಶ್ರಮ ಟ್ರಸ್ಟ್ ಸದಸ್ಯ ಹಾಗೂ ನಿವೃತ್ತ ಡಿವೈಎಸ್ಪಿ ಸಿದ್ರಾಮಪ್ಪ ಸಣ್ಣೂರ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9 ಗಂಟೆಗೆ ಮಹಾರುದ್ರಾಭಿಷೇಕ, ಪಾದಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ 7 ಗಂಟೆಗೆ ಭವ್ಯ ರಥೋತ್ಸವ ಜರುಗಲಿದೆ ಎಂದು ತಿಳಿಸಿದರು.
ಈ ಧಾರ್ಮಿಕ ಕಾರ್ಯಕ್ರಮಕ್ಕೆ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಎಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಮಾತಾಜಿಯವರ ಆಶೀರ್ವಾದ ಪಡೆಯುವಂತೆ ಮನವಿ ಮಾಡಿದರು.
ಭಕ್ತರ ಅನುಕೂಲಕ್ಕಾಗಿ ಮಹಾದಾಸೋಹ, ಕುಡಿಯುವ ನೀರು, ವಸತಿ ಹಾಗೂ ಅಗತ್ಯ ಮೂಲಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಕುಟುಂಬ ಸಮೇತರಾಗಿ ಭಾಗವಹಿಸುವ ಹಿನ್ನೆಲೆಯಲ್ಲಿ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರತಿ ವರ್ಷ ಉತ್ಸವದ ವೇಳೆ ಸರಗಳ್ಳತನದಂತಹ ಘಟನೆಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ, ವಿಶೇಷವಾಗಿ ಮಹಿಳಾ ಭಕ್ತರು ಹೆಚ್ಚಿನ ಮೌಲ್ಯದ ಚಿನ್ನಾಭರಣ ಧರಿಸದೆ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದರು. ಜೊತೆಗೆ, ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ವಿಶೇಷ ಪೊಲೀಸ್ ಬಂದೋಬಸ್ತ್ ಕಲ್ಪಿಸುವಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಶಿವಯ್ಯಸ್ವಾಮಿ, ಸೂರ್ಯಕಾಂತ್ ಅವರಾದ್, ರಾಜು ಸೊನ್ನ ಹಾಗೂ ಧೂಳಪ್ಪ ಸೇರಿದಂತೆ ಟ್ರಸ್ಟ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.



