ಕಲಬುರಗಿಯಲ್ಲಿ ಜು.27ರಂದು ‘ಗೋಮಾತೆ ರಾಷ್ಟ್ರಮಾತೆ’ ಘೋಷಣೆಗೆ 2ನೇ ಹಂತದ ಸಹಿ ಅಭಿಯಾನ
ಗೋಮಾತೆಯನ್ನು ರಾಷ್ಟ್ರಮಾತೆಯಾಗಿ ಘೋಷಿಸುವಂತೆ ಆಗ್ರಹಿಸಿ ಬೃಹತ್ ಮೆರವಣಿಗೆ, ಮನವಿ ಸಲ್ಲಿಕೆ; ಲಕ್ಷಾಂತರ ಜನರ ಬೆಂಬಲಕ್ಕೆ ಕರೆ.

ಕಲಬುರಗಿ, ಜು.25: ಗೋಮಾತೆಯನ್ನು ರಾಷ್ಟ್ರಮಾತೆಯಾಗಿ ಘೋಷಿಸುವಂತೆ ಆಗ್ರಹಿಸಿ ದೇಶವ್ಯಾಪಿ ನಡೆಯುತ್ತಿರುವ ಎರಡನೇ ಹಂತದ ಸಹಿ ಸಂಗ್ರಹ ಅಭಿಯಾನವನ್ನು ಜುಲೈ 27ರಂದು ಕಲಬುರಗಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಸವಾಮೃತ ಗೋರಕ್ಷ ಶರಣರು ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸಾಧು-ಸಂತರ ನೇತೃತ್ವದಲ್ಲಿ ಜನವರಿ 2026ರಲ್ಲಿ ಆರಂಭವಾದ ಗೋಸಮ್ಮಾನ ಅಭಿಯಾನದ ಮೊದಲ ಹಂತವು ಏಪ್ರಿಲ್ 27ರಂದು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ದೇಶದಾದ್ಯಂತ ಸುಮಾರು 5 ಕೋಟಿ 25 ಲಕ್ಷ ಸಹಿಗಳನ್ನು ಸಂಗ್ರಹಿಸಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಎರಡನೇ ಹಂತದಲ್ಲಿ ದೇಶಾದ್ಯಂತ 16 ಕೋಟಿ ಸಹಿಗಳನ್ನು ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ದೇಶದ 780 ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಗೋಮಾತೆಯನ್ನು ರಾಷ್ಟ್ರಮಾತೆಯಾಗಿ ಘೋಷಿಸುವಂತೆ ಮನವಿ ಸಲ್ಲಿಸಲಾಗುತ್ತದೆ. ಕಲಬುರಗಿ ಜಿಲ್ಲೆಯಲ್ಲಿಯೂ ಸುಮಾರು 2 ಲಕ್ಷ ಸಹಿಗಳನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಜುಲೈ 27ರಂದು ಬೆಳಿಗ್ಗೆ 10 ಗಂಟೆಗೆ ನಗರದ ಮಹಾದಾಸೋಹಿ ಶರಣಬಸವೇಶ್ವರ ದೇವಸ್ಥಾನದಿಂದ ಗೋಮಾತೆ ಯಾತ್ರೆ ಆರಂಭವಾಗಿ ಮಧ್ಯಾಹ್ನ 2 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಲಿದೆ. ಮೆರವಣಿಗೆಯಲ್ಲಿ ಭಜನೆ, ಕೀರ್ತನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಗೋಭಕ್ತರು, ಗೋರಕ್ಷಕರು, ಗೋಶಾಲೆಗಳ ನಿರ್ವಾಹಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಗೋಮಾತೆಯನ್ನು ರಾಷ್ಟ್ರಮಾತೆಯಾಗಿ ಘೋಷಿಸುವುದು ದೇಶದ ಕೃಷಿ, ಪರಿಸರ ಹಾಗೂ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟ ಅವರು, ಜಾತಿ, ಧರ್ಮ ಹಾಗೂ ರಾಜಕೀಯ ಭೇದಭಾವ ಮೀರಿ ಎಲ್ಲರೂ ಈ ಅಭಿಯಾನಕ್ಕೆ ಬೆಂಬಲ ನೀಡುವಂತೆ ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಹಾದೇವಿ ಪಾಟೀಲ, ಲಕ್ಷ್ಮೀಕಾಂತ ಸ್ವಾದಿ, ಸಿದ್ಧರಾಜ್ ಬಿರಾದಾರ, ಅನಿಲ್ ಸಿನೂರಕರ, ಸುರೇಶ್ ತೆಂಗಳಿ, ದಶರಥ ಇಂಗೋಳೆ, ಮಲ್ಲಿಕಾರ್ಜುನ, ಮಾಲಾ ಕಣ್ಣಿ, ಸಂತೋಷ್, ವಿಜಯಲಕ್ಷ್ಮೀ ಸಿಂಗೋಡಿ, ನಾಗೇಶ್ ನಾಗಭೂಜಂಗೆ, ಶೀಲಾ ಕಲಬುರಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



