ಅಪರಾಧ

ಎಪಿಎಂಸಿ ಹಿಂಬದಿ ಗೇಟ್ ಬಳಿ ಅಕ್ರಮ ಅಕ್ಕಿ ಸಾಗಣೆ ಪತ್ತೆ; ಲಾರಿ ಜಪ್ತಿ

220 ಕ್ವಿಂಟಲ್ ಪಡಿತರ ಅಕ್ಕಿ ಹಾಗೂ ಲಾರಿ ಸೇರಿ ₹11.48 ಲಕ್ಷ ಮೌಲ್ಯದ ವಸ್ತು ವಶ; ಚಾಲಕ ಪರಾರಿ.

ಕಲಬುರಗಿ, ಜು.25: ನಗರದ ಗಂಜ್ ಪ್ರದೇಶದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಹಿಂಬದಿ ಗೇಟ್ ಸಮೀಪ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಣೆ ಮಾಡುತ್ತಿದ್ದ ಲಾರಿಯನ್ನು ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ. ಈ ಸಂಬಂಧ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.

ಆಹಾರ ನಿರೀಕ್ಷಕಿ ವಿದ್ಯಾಶ್ರೀ ಪಾಟೀಲ್ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪಂಚರು ಹಾಗೂ ಪೊಲೀಸರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ವೇಳೆ, ಅನುಮಾನಾಸ್ಪದವಾಗಿ ನಿಂತಿದ್ದ ಲಾರಿಯನ್ನು ಕಂಡುಬಂದಿತು. ಅಧಿಕಾರಿಗಳು ಲಾರಿಯತ್ತ ತೆರಳುತ್ತಿದ್ದಂತೆ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಲಾರಿಯನ್ನು ಪರಿಶೀಲಿಸಿದಾಗ ಕಪ್ಪು ಮತ್ತು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದ 550 ಚೀಲಗಳ ಅಕ್ಕಿ ಪತ್ತೆಯಾಗಿದೆ. ಪ್ರತಿ ಚೀಲದಲ್ಲಿ ಸುಮಾರು 40 ಕೆ.ಜಿ. ಅಕ್ಕಿ ಇದ್ದು, ಒಟ್ಟು 220 ಕ್ವಿಂಟಲ್ ಅಕ್ಕಿ ಸಾಗಣೆ ಮಾಡಲಾಗುತ್ತಿತ್ತು.

ಪರಿಶೀಲನೆ ವೇಳೆ ಈ ಅಕ್ಕಿಯು ಪಡಿತರ ಚೀಟಿದಾರರಿಗೆ ಹಾಗೂ ಸರ್ಕಾರದ ವಿವಿಧ ಯೋಜನೆಗಳಡಿ ವಿತರಿಸಬೇಕಾದ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಅಕ್ಕಿಯಾಗಿರುವುದು ದೃಢಪಟ್ಟಿದೆ.

ಜಪ್ತಿ ಮಾಡಲಾದ ಅಕ್ಕಿಯ ಅಂದಾಜು ಮೌಲ್ಯ ₹7.48 ಲಕ್ಷ ಹಾಗೂ ಲಾರಿಯ ಮೌಲ್ಯ ₹4 ಲಕ್ಷ ಸೇರಿ ಒಟ್ಟು ₹11.48 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾತ್ರಿ ಸಮಯವಾಗಿದ್ದರಿಂದ ಜಪ್ತಿ ಮಾಡಿದ ಅಕ್ಕಿ ಹಾಗೂ ಲಾರಿಯನ್ನು ಸುರಕ್ಷತೆ ದೃಷ್ಟಿಯಿಂದ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಚೌಕ್ ಪೊಲೀಸ್ ಠಾಣೆಯ ಎಎಸ್‌ಐ ತಾರಾಸಿಂಗ್ ಹಾಗೂ ಸಿಬ್ಬಂದಿಗಳಾದ ಸುರೇಶ್ ಮತ್ತು ಶಿವಪ್ಪ ಭಾಗವಹಿಸಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾದ ಲಾರಿ ಚಾಲಕನ ಪತ್ತೆಗೆ ಹಾಗೂ ಅಕ್ರಮ ಸಾಗಣೆ ಜಾಲದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button