ಮನೆ ಕಳ್ಳತನ ಪ್ರಕರಣಕ್ಕೆ 15 ತಿಂಗಳ ಬಳಿಕ ದೂರು; ₹7.87 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು
2025ರ ಏಪ್ರಿಲ್‌ನಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಇದೀಗ ದೂರು ದಾಖಲು; ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭ.

ಕಲಬುರಗಿ, ಜು.25: ನಗರದ ಬಿದ್ದಾಪುರ ಕಾಲೊನಿಯಲ್ಲಿರುವ ಬಾಡಿಗೆ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸುಮಾರು 15 ತಿಂಗಳ ಬಳಿಕ ದೂರು ದಾಖಲಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ದೂರಿನ ಪ್ರಕಾರ, ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಯೋಹಾನ್ ಅವರ ಪತ್ನಿ ಶ್ರೀಮತಿ ಚಂದಮ್ಮ ಅಲಿಯಾಸ್ ಚಂದ್ರಕಲಾ ಯೋಹಾನ್ ರೇವಣೂರ ಅವರ ಬಾಡಿಗೆ ಮನೆಯಲ್ಲಿ 2025ರ ಏಪ್ರಿಲ್ 8ರ ಮಧ್ಯರಾತ್ರಿ ಕಳ್ಳತನ ನಡೆದಿದೆ.
ಕಳ್ಳರು ಮನೆಯ ಬಾಗಿಲಿನ ಕೊಂಡಿ ಮುರಿದು ಒಳನುಗ್ಗಿ ಅಲ್ಮಾರಿಯನ್ನು ಒಡೆದು ಸುಮಾರು ₹7.87 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿಯ ವಸ್ತುಗಳು, ನಗದು ಹಾಗೂ ಮೋಟಾರ್‌ಸೈಕಲ್‌ನ್ನು ಕಳವು ಮಾಡಿದ್ದಾರೆ. ಕಳುವಾದ ವಸ್ತುಗಳಲ್ಲಿ 55 ಗ್ರಾಂ ತೂಕದ ತಾಳಿ ಚೈನ್, 20 ಗ್ರಾಂ ತೂಕದ ಎರಡು ಸರಗಳು, 23 ಗ್ರಾಂ ತೂಕದ ಲಾಕೆಟ್, 10 ಗ್ರಾಂ ತೂಕದ ಉಂಗುರ, ತಲಾ 5 ಗ್ರಾಂ ತೂಕದ ನಾಲ್ಕು ಉಂಗುರಗಳು ಸೇರಿದಂತೆ ಹಲವು ಅಮೂಲ್ಯ ವಸ್ತುಗಳಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ನಡೆದ ರಾತ್ರಿ ಮನೆಯವರು ಮನೆಯ ಮೇಲ್ಛಾವಣಿಯಲ್ಲಿ ಮಲಗಿದ್ದ ವೇಳೆ, ಬೆಳಗಿನ ಜಾವ ಪರಿಚಯಸ್ಥರು ಕರೆ ಮಾಡಿ ವಾಹನದ ಬಗ್ಗೆ ವಿಚಾರಿಸಿದ ನಂತರ ಅನುಮಾನ ವ್ಯಕ್ತವಾಗಿತ್ತು. ಮನೆಯ ಬಾಗಿಲು ಹೊರಗಿನಿಂದ ಲಾಕ್ ಮಾಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ 112 ತುರ್ತು ಸೇವೆಗೆ ಕರೆ ಮಾಡಲಾಗಿತ್ತು. ಬಳಿಕ ಸಂಬಂಧಿಕರ ಸಹಾಯದಿಂದ ಮನೆ ತೆರೆದು ನೋಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿತ್ತು.
ಈ ಕುರಿತು ಇದೀಗ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



