ಜಿಲ್ಲಾಸುದ್ದಿ

ಬಾಕಿ ಬಿಲ್ ಪಾವತಿಗೆ 10 ದಿನ ಗಡುವು: ಇಲ್ಲದಿದ್ದರೆ ಪಾಲಿಕೆ ಎದುರು ಧರಣಿ ಎಚ್ಚರಿಕೆ

15ನೇ ಹಣಕಾಸು ಯೋಜನೆಯ ಕಾಮಗಾರಿಗಳ ಬಾಕಿ ಪಾವತಿಗೆ ಒತ್ತಾಯ; ಗುತ್ತಿಗೆದಾರರ ಸಂಘದಿಂದ ಸರ್ಕಾರಕ್ಕೆ ಮನವಿ

ಕಲಬುರಗಿ, ಆ. 3: ಮಹಾನಗರ ಪಾಲಿಕೆಯ 15ನೇ ಹಣಕಾಸು ಯೋಜನೆಯಡಿ 2024–25 ಹಾಗೂ 2025–26ನೇ ಸಾಲಿನಲ್ಲಿ ಪೂರ್ಣಗೊಂಡ ಕಾಮಗಾರಿಗಳ ಬಾಕಿ ಬಿಲ್‌ಗಳನ್ನು ಕೂಡಲೇ ಪಾವತಿಸಬೇಕು. ಇಲ್ಲವಾದರೆ 10 ದಿನಗಳ ಬಳಿಕ ಮಹಾನಗರ ಪಾಲಿಕೆ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಮಹಾನಗರ ಪಾಲಿಕೆ ಗುತ್ತಿಗೆದಾರರ ಅಭಿವೃದ್ಧಿಪರ ಕಲ್ಯಾಣ ಸಂಘದ ಗೌರವಾಧ್ಯಕ್ಷ ಗಿರೀಶ್ ಕಟ್ಟಿಮನಿ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ಪೂರ್ಣಗೊಂಡ ಕಾಮಗಾರಿಗಳ ಬಿಲ್‌ಗಳು ಬಾಕಿ ಉಳಿದಿರುವುದರಿಂದ ಗುತ್ತಿಗೆದಾರರು ಮತ್ತು ಅವರ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.

ಈ ಕುರಿತು ಹಲವು ಬಾರಿ ಪಾಲಿಕೆ ಆಯುಕ್ತರು ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಅನುದಾನ ಬಿಡುಗಡೆಯಾಗದ ಕಾರಣ ಬಿಲ್ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂಬ ಉತ್ತರ ಮಾತ್ರ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಮಸ್ಯೆಯನ್ನು ನಗರಾಭಿವೃದ್ಧಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಬೆಂಗಳೂರಿನ ಪೌರಾಡಳಿತ ಇಲಾಖೆಯ ನಿರ್ದೇಶಕರ ಗಮನಕ್ಕೂ ತರಲಾಗಿದೆ. ಆದಾಗ್ಯೂ ಬಾಕಿ ಬಿಲ್ ಪಾವತಿಗೆ ಸ್ಪಷ್ಟ ಕ್ರಮ ಕೈಗೊಳ್ಳದಿರುವುದು ಗುತ್ತಿಗೆದಾರರಲ್ಲಿ ಆತಂಕ ಉಂಟುಮಾಡಿದೆ ಎಂದು ಹೇಳಿದರು.

ಮಹಾನಗರ ಪಾಲಿಕೆಯ ಎಲ್ಲ ಗುತ್ತಿಗೆದಾರರು ಈಗಾಗಲೇ ಕಾಮಗಾರಿಗಳನ್ನು ಪೂರ್ಣಗೊಳಿಸಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಹಾಗೂ ಸಂಬಂಧಿತ ಸಚಿವರು ಕೂಡಲೇ ಬಾಕಿ ಬಿಲ್ ಬಿಡುಗಡೆ ಮಾಡಿ ಗುತ್ತಿಗೆದಾರರ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ, 15ನೇ ಹಣಕಾಸು ಯೋಜನೆಯಡಿ ಹೊಸ ಕಾಮಗಾರಿಗಳನ್ನು ಆರಂಭಿಸುವಂತೆ ಅಧಿಕಾರಿಗಳು ಸೂಚಿಸುತ್ತಿದ್ದಾರೆ. ಆದರೆ ಮೊದಲು ಪೂರ್ಣಗೊಂಡ ಕಾಮಗಾರಿಗಳ ಬಾಕಿ ಬಿಲ್ ಪಾವತಿಸಬೇಕು. ಅದರ ಬಳಿಕವೇ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಂಘ ಸ್ಪಷ್ಟಪಡಿಸಿದೆ.

ಮುಂದಿನ 10 ದಿನಗಳೊಳಗೆ ಬಾಕಿ ಬಿಲ್ ಪಾವತಿಸದಿದ್ದರೆ ಜಿಲ್ಲೆಯ ಎಲ್ಲ ಗುತ್ತಿಗೆದಾರರು ಒಂದಾಗಿ ಮಹಾನಗರ ಪಾಲಿಕೆ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಗಿರೀಶ್ ಕಟ್ಟಿಮನಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮನೋಜ್ ಎಸ್. ಜಾಧವ್, ನಾಗರಾಜ ಆಲೂರ, ನರಸಪ್ಪ ಬಲ್ರೆ, ಚಂದ್ರಶೇಖರ ಬೆಣ್ಣೂರ, ರಫೀಕ್ ಅಹ್ಮದ್, ಸುನೀಲ್ ರೇಕುಳಗಿ, ಗುರಪ್ಪ ಸಾಲಂಕೆ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button