ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ: ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಪರಿಹರಿಸಲು ಸೂಚನೆ
ಫಲಾನುಭವಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮಕ್ಕೆ ಚಂದ್ರಿಕಾ ಪರಮೇಶ್ವರ್ ಅಧಿಕಾರಿಗಳಿಗೆ ನಿರ್ದೇಶನ

ಜಿಲ್ಲೆಯಲ್ಲಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯುವಲ್ಲಿ ಸಾರ್ವಜನಿಕರಿಗೆ ಯಾವುದೇ ಗೊಂದಲ ಅಥವಾ ತಾಂತ್ರಿಕ ತೊಂದರೆ ಉಂಟಾಗದಂತೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುರುವಾರ ನಗರದ ಜಿಲ್ಲಾ ಪಂಚಾಯತ್ ಹೊಸ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆಯಡಿ ತಾಂತ್ರಿಕ ಕಾರಣಗಳಿಂದ ಹಣ ಜಮೆಯಾಗದ ಮಹಿಳೆಯರು ಅಗತ್ಯ ದಾಖಲೆಗಳೊಂದಿಗೆ ಸಂಬಂಧಿಸಿದ ತಾಲೂಕಿನ ಸಿಡಿಪಿಒ ಕಚೇರಿಯನ್ನು ಸಂಪರ್ಕಿಸುವಂತೆ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಗ್ಯಾರಂಟಿ ಯೋಜನೆಗಳಡಿ ಫಲಾನುಭವಿಗಳ ಖಾತೆಗೆ ಜಮೆಯಾಗುವ ಅನುದಾನವನ್ನು ಬ್ಯಾಂಕ್‌ಗಳು ಹಳೆಯ ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳಬಾರದು. ಬ್ಯಾಂಕ್ ಸಿಬ್ಬಂದಿ ಸಾರ್ವಜನಿಕರೊಂದಿಗೆ ಕಡ್ಡಾಯವಾಗಿ ಸ್ಥಳೀಯ ಭಾಷೆಯಲ್ಲಿಯೇ ವ್ಯವಹರಿಸಬೇಕು ಎಂದು ಅವರು ತಿಳಿಸಿದರು.
ಗೃಹಲಕ್ಷ್ಮೀ ಯೋಜನೆಯಡಿ ಕಲಬುರಗಿ ಜಿಲ್ಲೆಯಲ್ಲಿ 5,97,166 ಮಹಿಳೆಯರು ನೋಂದಾಯಿಸಿಕೊಂಡಿದ್ದು, 2023-24ರಲ್ಲಿ ₹782.64 ಕೋಟಿ, 2024-25ರಲ್ಲಿ ₹1,044.48 ಕೋಟಿ, 2025-26ರಲ್ಲಿ ₹1,077.88 ಕೋಟಿ ಹಾಗೂ 2026-27ನೇ ಸಾಲಿನ ಏಪ್ರಿಲ್‌ವರೆಗೆ ₹1,133.76 ಕೋಟಿ ಸೇರಿದಂತೆ ಒಟ್ಟು ₹3,018.39 ಕೋಟಿ ಅನುದಾನ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. ಈ ಯೋಜನೆಯು ಲಕ್ಷಾಂತರ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ನೆರವಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಎಸ್. ಸಂಕನೂರ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯ ದುರ್ಬಳಕೆ ತಡೆಯಲು ವಿಶೇಷ ಪರಿಶೀಲನೆ ನಡೆಯುತ್ತಿದೆ. ಜಿಲ್ಲೆಯ 9,156 ಮೃತ ಫಲಾನುಭವಿಗಳ ಪೈಕಿ 3,820 ಖಾತೆಗಳಿಗೆ ತಪ್ಪಾಗಿ ಜಮೆಯಾಗಿದ್ದ ₹44.34 ಲಕ್ಷವನ್ನು ಲೀಡ್ ಬ್ಯಾಂಕ್‌ಗಳ ಸಹಕಾರದಿಂದ ಸರ್ಕಾರಕ್ಕೆ ಮರಳಿ ಜಮೆ ಮಾಡಲಾಗಿದೆ. ಉಳಿದ ಮೊತ್ತದ ಮರುಪಾವತಿ ಪ್ರಕ್ರಿಯೆ ಮುಂದುವರಿದಿದ್ದು, ಶೀಘ್ರದಲ್ಲೇ ಮನೆ-ಮನೆಗೆ ಭೇಟಿ ನೀಡಿ ಬಯೋಮೆಟ್ರಿಕ್ ಮೂಲಕ ಮರುಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.
ಗೃಹಜ್ಯೋತಿ ಯೋಜನೆಯಡಿ 5.86 ಲಕ್ಷಕ್ಕೂ ಹೆಚ್ಚು ಗ್ರಾಹಕರು ನೋಂದಾಯಿಸಿಕೊಂಡಿದ್ದು, ಹೆಚ್ಚುವರಿ ವಿದ್ಯುತ್ ಬಿಲ್ ಕುರಿತು ಉಂಟಾಗಿರುವ ಗೊಂದಲ ನಿವಾರಣೆಗೆ ಜೆಸ್ಕಾಂ ವಿಶೇಷ ಪರಿಶೀಲನಾ ತಂಡಗಳನ್ನು ರಚಿಸಿದೆ. ಪ್ರತಿದಿನ ಸುಮಾರು 3,000 ಅರ್ಜಿಗಳನ್ನು ಪರಿಶೀಲಿಸಿ ಇತ್ಯರ್ಥಪಡಿಸಲಾಗುತ್ತಿದೆ. ಕಳೆದ ಒಂದು ವರ್ಷದ ಸರಾಸರಿ ಬಳಕೆಯನ್ನು ಮೀರಿದರೆ ಅಥವಾ ಹಳೆಯ ಬಿಲ್ ಬಾಕಿ ಇದ್ದರೆ ಮಾತ್ರ ಹೆಚ್ಚುವರಿ ಮೊತ್ತ ಪಾವತಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಯುವನಿಧಿ ಯೋಜನೆಯಡಿ ಕಲಬುರಗಿ ಜಿಲ್ಲೆಯಲ್ಲಿ 31,807ಕ್ಕೂ ಹೆಚ್ಚು ನಿರುದ್ಯೋಗಿ ಯುವಕರು ನೋಂದಾಯಿಸಿಕೊಂಡಿದ್ದು, ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ. ಯುವಕರು ಪ್ರತಿ ತಿಂಗಳು ಸ್ವಯಂ ಘೋಷಣೆ ಸಲ್ಲಿಸುವ ಮೂಲಕ ಭತ್ಯೆಯ ಜೊತೆಗೆ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿಯ ಸೌಲಭ್ಯ ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದರು.
ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 22 ಕೋಟಿಗೂ ಅಧಿಕ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸಲಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದರು.
ಅನ್ನಭಾಗ್ಯ ಯೋಜನೆಯಡಿ ವಿತರಿಸುವ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಅಂತಹ ಪ್ರಕರಣಗಳಲ್ಲಿ ಲೋಪ ಎಸಗುವ ನ್ಯಾಯಬೆಲೆ ಅಂಗಡಿಗಳನ್ನು ತಕ್ಷಣ ಅಮಾನತುಗೊಳಿಸಿ, ಸ್ಥಳ ಪರಿಶೀಲನೆ ನಡೆಸಬೇಕು. ಅಲ್ಲದೆ ಪ್ರತಿಯೊಂದು ನ್ಯಾಯಬೆಲೆ ಅಂಗಡಿಯ ಮುಂಭಾಗದಲ್ಲಿ ದೂರು ಸಲ್ಲಿಸಲು ಸಹಾಯವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಚಂದ್ರಿಕಾ ಪರಮೇಶ್ವರ್ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಸೋಮಶೇಖರ ಹಿರೇಮಠ, ವಿಜಯಕುಮಾರ ಕಟ್ಟಿಮನಿ, ನಿರ್ಮಲಾ ಬರ್ಗಲಿ, ಸುರೇಶ್ ತಿಪ್ಪಶೆಟ್ಟಿ, ನರಸಿಂಹಲು ಕುಂಬಾರ, ಜಿಲ್ಲಾ ಸಮಿತಿ ಸದಸ್ಯರು, ವಿವಿಧ ತಾಲೂಕಿನ ಅಧ್ಯಕ್ಷರು-ಉಪಾಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಸಿಪಿಒ ಮಧುಮತಿ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



