ಸಂಶೋಧಕರು ಕೃತಿಚೌರ್ಯದಿಂದ ದೂರವಿದ್ದು ಗುಣಮಟ್ಟದ ಸಂಶೋಧನೆ ನಡೆಸಬೇಕು: ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ
ಪ್ರಾಮಾಣಿಕತೆ, ನೈತಿಕತೆ ಮತ್ತು ಗುಣಮಟ್ಟವೇ ಸಂಶೋಧನೆಯ ಜೀವಾಳ ಎಂದು ಕರೆ

ಸಂಶೋಧಕರು ಸದಾ ಅರ್ಥಪೂರ್ಣ ಸಂಶೋಧನಾ ವಿಷಯಗಳನ್ನು ಆಯ್ಕೆ ಮಾಡಿಕೊಂಡು, ಕೃತಿಚೌರ್ಯದಿಂದ ದೂರವಿದ್ದು ಪ್ರಾಮಾಣಿಕತೆ ಹಾಗೂ ನೈತಿಕತೆಯೊಂದಿಗೆ ಗುಣಮಟ್ಟದ ಸಂಶೋಧನೆ ನಡೆಸಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಕರೆ ನೀಡಿದರು.
ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕೇಂದ್ರ ಗ್ರಂಥಾಲಯದ ವತಿಯಿಂದ ಡಾ. ಎಸ್.ಆರ್. ರಂಗನಾಥನ್ ಸಭಾಂಗಣದಲ್ಲಿ ನೂತನ ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “ಸಂಶೋಧನೆ ಮತ್ತು ಪ್ರಕಟಣೆಯ ನೈತಿಕತೆ” ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಶೋಧನೆಯ ಯಶಸ್ಸಿಗೆ ಪ್ರಾಮಾಣಿಕತೆ, ಸಮಗ್ರತೆ, ಸ್ವಂತಿಕೆ ಹಾಗೂ ನೈತಿಕ ಮೌಲ್ಯಗಳು ಅತ್ಯಗತ್ಯವಾಗಿವೆ. ಸಂಶೋಧಕರು ಅರ್ಥಪೂರ್ಣ ವಿಷಯಗಳನ್ನು ಆಯ್ಕೆ ಮಾಡಿಕೊಂಡು, ಕೃತಿಚೌರ್ಯಕ್ಕೆ ಅವಕಾಶ ನೀಡದೆ ತಮ್ಮ ಸಂಶೋಧನಾ ಲೇಖನಗಳನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಜರ್ನಲ್ಗಳಲ್ಲಿ ಪ್ರಕಟಿಸುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಸಂವಹನ ಕೌಶಲ್ಯ, ಭಾಷಾ ಸಾಮರ್ಥ್ಯ ಹಾಗೂ ಬರವಣಿಗೆಯ ಕೌಶಲ್ಯವನ್ನು ನಿರಂತರವಾಗಿ ಬೆಳೆಸಿಕೊಳ್ಳಬೇಕು. ವಿಶ್ವವಿದ್ಯಾಲಯದ ಅತ್ಯಾಧುನಿಕ ಗ್ರಂಥಾಲಯ ಹಾಗೂ ಡಿಜಿಟಲ್ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಸಂಶೋಧನೆಯ ಗುಣಮಟ್ಟ ಹೆಚ್ಚಲಿದೆ ಎಂದು ಹೇಳಿದರು.
ದೇಶದ ವಿದ್ಯಾರ್ಥಿಗಳು ಮತ್ತು ಸಂಶೋಧಕರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಹಾಗೂ ಯುಜಿಸಿ ಸಹಯೋಗದಲ್ಲಿ ಜಾರಿಗೊಂಡಿರುವ ‘ಒನ್ ನೇಷನ್-ಒನ್ ಸಬ್ಸ್ಕ್ರಿಪ್ಷನ್’ ಯೋಜನೆಯಡಿ 13 ಸಾವಿರಕ್ಕೂ ಹೆಚ್ಚು ಅಂತರರಾಷ್ಟ್ರೀಯ ಸಂಶೋಧನಾ ಜರ್ನಲ್ಗಳ ಪ್ರವೇಶ ಲಭ್ಯವಿದ್ದು, ವಿದ್ಯಾರ್ಥಿಗಳು ಇದರ ಸಂಪೂರ್ಣ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಕೇಂದ್ರ ಗ್ರಂಥಾಲಯದಲ್ಲಿ ವೈ-ಫೈ, ಡಿಜಿಟಲ್ ಸಂಪನ್ಮೂಲಗಳು, ಜರ್ನಲ್ಗಳು, ಪುಸ್ತಕ ಬ್ಯಾಂಕ್, ಟರ್ನಿಟಿನ್ ಕೃತಿಚೌರ್ಯ ಪತ್ತೆ ತಂತ್ರಾಂಶ ಸೇರಿದಂತೆ ವಿವಿಧ ಆಧುನಿಕ ಸೌಲಭ್ಯಗಳಿವೆ. ಶೀಘ್ರದಲ್ಲೇ 100 ಆಸನಗಳ ಸಾಮರ್ಥ್ಯದ ಹೊಸ ಡಿಜಿಟಲ್ ಅಧ್ಯಯನ ಕೇಂದ್ರವೂ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಪರೀಕ್ಷಾ ನಿಯಂತ್ರಕ ಪ್ರೊ. ಭರತ್ ಕುಮಾರ್, ಪಿಎಚ್.ಡಿ. ಪದವಿ ಪಡೆಯುವುದಷ್ಟೇ ಗುರಿಯಾಗಬಾರದು. ಸಮಾಜ ಮತ್ತು ದೇಶದ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಸಂಶೋಧನೆಯೇ ನಿಜವಾದ ಸಾಧನೆ ಎಂದು ಹೇಳಿದರು. ಸಂಶೋಧನಾ ವಿಧಾನ, ಸಂಶೋಧನಾ ಕೋರ್ಸ್ವರ್ಕ್, ಪಿಎಚ್.ಡಿ. ಪ್ರಕ್ರಿಯೆ ಹಾಗೂ ಪ್ರಕಟಣೆಯ ನೈತಿಕತೆಯ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಪಾಲಕ ಹಾಗೂ ಕಾರ್ಯಕ್ರಮ ಸಂಯೋಜಕ ಡಾ. ಪಿ.ಎಸ್. ಕಟ್ಟಿಮನಿ ಸ್ವಾಗತಿಸಿದರು. ಸಂಶೋಧನಾ ವಿಧಾನ, ವಿಷಯ ಆಯ್ಕೆ, ಮಾಹಿತಿ ಸಂಗ್ರಹ, ತಂತ್ರಜ್ಞಾನದ ಬಳಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ತಜ್ಞರು ಮಾರ್ಗದರ್ಶನ ನೀಡಿದರು.
ಕಾರ್ಯಾಗಾರದಲ್ಲಿ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಸಂಶೋಧನಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.



