ಜಿಮ್ಸ್‌ನಲ್ಲಿ ಮಿಷನ್ ಸ್ಮೈಲ್ ಶಿಬಿರಕ್ಕೆ ಚಾಲನೆ: 50ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಸೀಳುತುಟಿ ಶಸ್ತ್ರಚಿಕಿತ್ಸೆ
ಮುತ್ತೂಟ್–ಮಿಷನ್ ಸ್ಮೈಲ್ ಸಹಭಾಗಿತ್ವದಲ್ಲಿ ಮಕ್ಕಳ ಮುಖದಲ್ಲಿ ಹೊಸ ನಗು ಮೂಡಿಸುವ ಮಾನವೀಯ ಸೇವೆ

ಮುತ್ತೂಟ್ ಪಾಪಚನ್ ಗ್ರೂಪ್ ಮತ್ತು ಮಿಷನ್ ಸ್ಮೈಲ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾದ ಉಚಿತ ಸಮಗ್ರ ಸೀಳುತುಟಿ ಹಾಗೂ ಸೀಳು ಅಂಗುಳಿ ಶಸ್ತ್ರಚಿಕಿತ್ಸಾ ಶಿಬಿರಕ್ಕೆ ಗುರುವಾರ ಕಲಬುರಗಿಯ ಜಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಿಷನ್ ಸ್ಮೈಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾನ್ರಾಡ್ ಜಿ. ಡೆನ್ನಿಸ್, ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ನುರಿತ ವೈದ್ಯರು ಹಾಗೂ ಸ್ವಯಂಸೇವಕರ ತಂಡದ ಸಹಕಾರದಿಂದ ಮುಂದಿನ ಮೂರುವರೆ ದಿನಗಳಲ್ಲಿ 50ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ ನಡೆಸಿ, ಅವರ ಜೀವನದಲ್ಲಿ ಹೊಸ ಆಶಾಕಿರಣ ಮೂಡಿಸಲಾಗುವುದು ಎಂದು ಹೇಳಿದರು.
ಮಿಷನ್ ಸ್ಮೈಲ್ 2003ರಿಂದ ನೋಂದಾಯಿತ ವೈದ್ಯಕೀಯ ದತ್ತಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ 23 ವರ್ಷಗಳಲ್ಲಿ ದೇಶಾದ್ಯಂತ 77 ಸಾವಿರಕ್ಕೂ ಹೆಚ್ಚು ಮಕ್ಕಳ ತಪಾಸಣೆ ನಡೆಸಿ, 52,500ಕ್ಕೂ ಹೆಚ್ಚು ಮಕ್ಕಳಿಗೆ ಯಶಸ್ವಿ ಸೀಳುತುಟಿ ಹಾಗೂ ಸೀಳು ಅಂಗುಳಿ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ನೆರವೇರಿಸಿದೆ. ಈ ಸೇವೆ ಮುಂದಿನ ದಿನಗಳಲ್ಲೂ ಇನ್ನಷ್ಟು ಮಕ್ಕಳಿಗೆ ತಲುಪುವ ವಿಶ್ವಾಸ ವ್ಯಕ್ತಪಡಿಸಿದರು.
ಮುತ್ತೂಟ್ ಪಾಪಚನ್ ಗ್ರೂಪ್‌ನ ಸಿಎಸ್‌ಆರ್ ಮುಖ್ಯಸ್ಥ ಪ್ರಶಾಂತಕುಮಾರ್ ಮಾತನಾಡಿ, ಮುತ್ತೂಟ್ ಸಂಸ್ಥೆ ಹಣಕಾಸು ಸೇವೆಗಳ ಜೊತೆಗೆ ಸಮಾಜಮುಖಿ ಆರೋಗ್ಯ ಸೇವೆಗಳಿಗೂ ಆದ್ಯತೆ ನೀಡುತ್ತಿದೆ ಎಂದರು. ಮುತ್ತೂಟ್ ಮತ್ತು ಮಿಷನ್ ಸ್ಮೈಲ್ ಸಹಭಾಗಿತ್ವಕ್ಕೆ ಇದು 12ನೇ ವರ್ಷವಾಗಿದ್ದು, ಇದುವರೆಗೆ 3,747 ಉಚಿತ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇದು ಎರಡನೇ ಶಿಬಿರವಾಗಿದ್ದು, ದೇಶದ ವಿವಿಧ ರಾಜ್ಯಗಳಲ್ಲಿ ಇನ್ನೂ ಆರು ಶಿಬಿರಗಳನ್ನು ಆಯೋಜಿಸುವ ಯೋಜನೆ ಇದೆ ಎಂದು ತಿಳಿಸಿದರು.
ಮುತ್ತೂಟ್ ಫಿನ್‌ಕಾರ್ಪ್, ಮೈಕ್ರೋ ಫೈನಾನ್ಸ್, ಹೌಸಿಂಗ್ ಫೈನಾನ್ಸ್, ಮುತ್ತೂಟ್ ಕ್ಯಾಪಿಟಲ್ ಸರ್ವಿಸಸ್, ರಿಸ್ಕ್ ಇನ್ಶೂರೆನ್ಸ್, ಎಕ್ಸಿಮ್ ಹಾಗೂ ಮುತ್ತೂಟ್ ಚಿಟ್ಸ್ ಸೇರಿದಂತೆ ಏಳು ಹಣಕಾಸು ಸಂಸ್ಥೆಗಳು ಈ ಸಿಎಸ್‌ಆರ್ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿವೆ ಎಂದು ಅವರು ಹೇಳಿದರು.
ಜಿಮ್ಸ್‌ನ ಹಿರಿಯ ವೈದ್ಯಾಧಿಕಾರಿ ಡಾ. ಶಿವಕುಮಾರ್ ದೇಶಮುಖ್ ಮಾತನಾಡಿ, ಹುಟ್ಟಿನಿಂದಲೇ ಸೀಳುತುಟಿ ಹಾಗೂ ಸೀಳು ಅಂಗುಳಿ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಸುರಕ್ಷಿತ ಮತ್ತು ಗುಣಮಟ್ಟದ ಉಚಿತ ಶಸ್ತ್ರಚಿಕಿತ್ಸೆ ನೀಡುವುದು ಶಿಬಿರದ ಪ್ರಮುಖ ಉದ್ದೇಶವಾಗಿದೆ ಎಂದರು.
ಮುಂದಿನ ಮೂರು ದಿನಗಳಲ್ಲಿ ನೋಂದಾಯಿಸಿಕೊಂಡಿರುವ 50ರಿಂದ 80 ಮಕ್ಕಳಿಗೆ ಜಿಮ್ಸ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುವುದು. ಶಿಬಿರದ ಯಶಸ್ವಿ ನಿರ್ವಹಣೆಗೆ ಅಗತ್ಯ ವೈದ್ಯಕೀಯ ಸೌಲಭ್ಯಗಳು ಹಾಗೂ ತಾಂತ್ರಿಕ ಸಿದ್ಧತೆಗಳನ್ನು ಮಾಡಲಾಗಿದೆ. ಇದೇ ವೇಳೆ ಓರಲ್ ಸರ್ಜರಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ತಜ್ಞ ವೈದ್ಯರ ಕಾರ್ಯವೈಖರಿಯನ್ನು ನೇರವಾಗಿ ಕಲಿಯುವ ಅಪೂರ್ವ ಅವಕಾಶವೂ ದೊರೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಿಷನ್ ಸ್ಮೈಲ್ ಟ್ರಸ್ಟಿ ಹಾಗೂ ಹಿರಿಯ ಅರಿವಳಿಕೆ ತಜ್ಞ ಡಾ. ರಾಮಕುಮಾರ್ ವೆಂಕಟೇಶ್ವರನ್, ಜಿಮ್ಸ್ ನಿರ್ದೇಶಕ ಡಾ. ಉಮೇಶ್ ಎಸ್.ಆರ್., ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಶಿವಕುಮಾರ್ ಸಿ.ಆರ್., ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ರೇವನಸಿದ್ದಪ್ಪ ಭೋಸಗಿ, ಅರಿವಳಿಕೆ ವಿಭಾಗದ ಮುಖ್ಯಸ್ಥ ಡಾ. ಜಗದೀಶ್ ಎಂ.ಬಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು.



