ಜನ್ಮದಿನವನ್ನು ಅನ್ನದಾತರಿಗೆ ಸಮರ್ಪಿಸುವುದು ಹೆಮ್ಮೆಯ ವಿಷಯ: ಪ್ರೊ. ವಾಸುದೇವ ಸೇಡಂ
ನ್ಯಾಯವಾದಿ ಹಣಮಂತರಾಯ ಅಟ್ಟೂರ್ ಜನ್ಮದಿನದ ಅಂಗವಾಗಿ ರೈತರು, ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ವಿಶೇಷ ಮಕ್ಕಳಿಗೆ ಸನ್ಮಾನನ್ಯಾಯವಾದಿ ಹಣಮಂತರಾಯ ಅಟ್ಟೂರ್ ಜನ್ಮದಿನದ ಅಂಗವಾಗಿ ರೈತರು, ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ವಿಶೇಷ ಮಕ್ಕಳಿಗೆ ಸನ್ಮಾನ

ಜನ್ಮದಿನವನ್ನು ಆಡಂಬರದಿಂದ ಆಚರಿಸುವ ಬದಲು ಸಮಾಜಮುಖಿ ಕಾರ್ಯಗಳಿಗೆ ಮೀಸಲಿಡುವುದು ಆದರ್ಶ ಎಂದು ಹಿರಿಯ ಸಾಹಿತಿ ಪ್ರೊ. ವಾಸುದೇವ ಸೇಡಂ ಹೇಳಿದರು.
ನಗರದ ಸರ್ಕಾರಿ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯಲ್ಲಿ ಜನ್ಮದಾತ ವಿ.ಎಸ್. ಅಟ್ಟೂರ್ ಸ್ಮಾರಕ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನ್ಯಾಯವಾದಿ ಹಣಮಂತರಾಯ ಅಟ್ಟೂರ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಣಮಂತರಾಯ ಅಟ್ಟೂರ್ ಅವರು ಸುಮಾರು 29 ವರ್ಷಗಳಿಂದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಅವರ ಜೀವನ ಚರಿತ್ರೆಯನ್ನು ಪುಸ್ತಕ ರೂಪದಲ್ಲಿ ದಾಖಲಿಸಿರುವುದಾಗಿ ತಿಳಿಸಿದ ಅವರು, ಸಮಾಜಮುಖಿ ಕಾರ್ಯಗಳ ಮೂಲಕ ಅಟ್ಟೂರ್ ಅವರು ಮಾದರಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನ್ಯಾಯವಾದಿ ಹಣಮಂತರಾಯ ಅಟ್ಟೂರ್ ಮಾತನಾಡಿ, ಈ ವರ್ಷ ಮಳೆಯ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಜನ್ಮದಿನದಂದು ಶಾಲು, ಹಾರ, ಕೇಕ್ ಮೊದಲಾದ ಆಡಂಬರಗಳಿಗೆ ಹಣ ವ್ಯಯಿಸುವ ಬದಲು ರೈತರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸಲ್ಲಿಸುವ ಮೂಲಕ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.
ಸರ್ಕಾರಿ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವಿಶಿಷ್ಟ ಪ್ರತಿಭೆ ಅಡಗಿದೆ. ಕೇಳುವ ಅಥವಾ ಮಾತನಾಡುವ ಸಾಮರ್ಥ್ಯ ಮಾತ್ರ ವ್ಯಕ್ತಿಯ ಸಾಧನೆಯನ್ನು ನಿರ್ಧರಿಸುವುದಿಲ್ಲ. ಆತ್ಮವಿಶ್ವಾಸ, ಪರಿಶ್ರಮ, ಶಿಸ್ತು ಹಾಗೂ ಕನಸುಗಳೇ ಯಶಸ್ಸಿನ ನಿಜವಾದ ಶಕ್ತಿ ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆಯ ಮಾತುಗಳನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಡಾ. ಲೋಕೇಶ್, ಪ್ರಕಾಶ್ ಭಜಂತ್ರಿ, ಶ್ರೀದೇವಿ ಅಟ್ಟೂರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರಗತಿಪರ ರೈತ ಲಕ್ಷ್ಮೀಕಾಂತ ತೆಂಗಳಿ, ಶಿಕ್ಷಕರಾದ ಜಯಶ್ರೀ, ಸಂತೋಷ್ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಾದ ಹಣಮಂತ ಮತ್ತು ಸಿದ್ದಲಿಂಗ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.



