ರಾಜ್ಯ

ಬಾಕಿ ಉಳಿದ ಮಾಸಾಶನಗಳನ್ನು ತಕ್ಷಣ ಬಿಡುಗಡೆಗೊಳಿಸಿ: ಮಹಮ್ಮದ್ ಇಬ್ರಾಹಿಂ ಆಗ್ರಹ

ವೃದ್ಧಾಪ್ಯ ವೇತನ ಸೇರಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಮಾಸಾಶನ ಪುನರಾರಂಭಕ್ಕೆ ಒತ್ತಾಯಿಸಿ ಮನವಿ

ಹಲವು ತಿಂಗಳುಗಳಿಂದ ಸ್ಥಗಿತಗೊಂಡಿರುವ ವೃದ್ಧಾಪ್ಯ ವೇತನ, ರಾಷ್ಟ್ರೀಯ ಕುಟುಂಬ ಭದ್ರತಾ ಯೋಜನೆ, ಸಂಧ್ಯಾ ಸುರಕ್ಷಾ ವೇತನ, ಅಂಗವಿಕಲರ ವೇತನ ಹಾಗೂ ಮನಸ್ವಿನಿ ಯೋಜನೆಯ ಮಾಸಾಶನಗಳನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ, ತಾಲೂಕು ದೈಹಿಕ ಮತ್ತು ಮಾನಸಿಕ ಅಂಗವಿಕಲರ ವಿವಿಧೋದ್ದೇಶ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಅಂಗವಿಕಲರು ಹಾಗೂ ಹಿರಿಯ ನಾಗರಿಕರು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಮಹಮ್ಮದ್ ಇಬ್ರಾಹಿಂ ಮಾತನಾಡಿ, ವೃದ್ಧಾಪ್ಯ ವೇತನ, ರಾಷ್ಟ್ರೀಯ ಕುಟುಂಬ ಭದ್ರತಾ ಯೋಜನೆ, ಸಂಧ್ಯಾ ಸುರಕ್ಷಾ ವೇತನ, ಅಂಗವಿಕಲರ ವೇತನ ಹಾಗೂ ಮನಸ್ವಿನಿ ಯೋಜನೆಗಳ ಮಾಸಾಶನ ಕಳೆದ ಐದು ತಿಂಗಳಿಂದ ಸ್ಥಗಿತಗೊಂಡಿದೆ. ಇದರಿಂದ ಫಲಾನುಭವಿಗಳು ತಾಲೂಕು ಹಾಗೂ ಅಂಚೆ ಕಚೇರಿಗಳಿಗೆ ಅಲೆದಾಡುವಂತಾಗಿದೆ ಎಂದು ಆರೋಪಿಸಿದರು.

ಪ್ರತಿ ತಿಂಗಳು ದೊರೆಯಬೇಕಾದ ಮಾಸಾಶನ ಸಿಗದ ಕಾರಣ ಫಲಾನುಭವಿಗಳ ಜೀವನ ನಿರ್ವಹಣೆ ಸಂಕಷ್ಟಕ್ಕೀಡಾಗಿದೆ. ಯುಡಿಐಡಿ (UDID) ಕಾರ್ಡ್ ಹೊಂದಿದ್ದರೂ ಅನೇಕ ಅಂಗವಿಕಲರಿಗೆ ಮಾಸಾಶನ ದೊರೆಯುತ್ತಿಲ್ಲ. ಆದಾಯ ಮಿತಿಯನ್ನು 80 ಸಾವಿರ, 1 ಲಕ್ಷ ಹಾಗೂ 1.20 ಲಕ್ಷ ರೂ. ಎಂದು ನಿಗದಿಪಡಿಸಿರುವುದರಿಂದ ಅರ್ಜಿಗಳು ತಿರಸ್ಕೃತವಾಗುತ್ತಿವೆ. ಇದರಿಂದ ನಿಜವಾದ ಅರ್ಹರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ದೂರಿದರು.

ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ವಾರ್ಷಿಕ 30 ಸಾವಿರ ರೂ. ಆದಾಯ ಮಿತಿಯ ಆಧಾರದ ಮೇಲೆ ಆದಾಯ ಪ್ರಮಾಣ ಪತ್ರ ನೀಡಬೇಕು. ಆದರೆ ಹೆಚ್ಚಿನ ಆದಾಯ ದಾಖಲಿಸಲಾಗುತ್ತಿರುವ ಕಾರಣ ಎರಡು ವರ್ಷಗಳಿಂದ ಅರ್ಜಿಗಳು ಬಾಕಿ ಉಳಿಯುತ್ತಿದ್ದು, ಎಲ್ಲ ದಾಖಲೆಗಳನ್ನು ಸಲ್ಲಿಸಿದರೂ ಅರ್ಜಿಗಳು ತಿರಸ್ಕೃತವಾಗುತ್ತಿವೆ. ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ನೀಡುತ್ತಿರುವ ಮಾಸಾಶನದ ಮಾದರಿಯಲ್ಲೇ ಕರ್ನಾಟಕದಲ್ಲಿಯೂ ವೃದ್ಧಾಪ್ಯ ವೇತನ, ರಾಷ್ಟ್ರೀಯ ಕುಟುಂಬ ಭದ್ರತಾ ಯೋಜನೆ, ಸಂಧ್ಯಾ ಸುರಕ್ಷಾ ವೇತನ, ಅಂಗವಿಕಲರ ವೇತನ ಹಾಗೂ ಮನಸ್ವಿನಿ ಯೋಜನೆಗಳ ಮಾಸಾಶನವನ್ನು ಹೆಚ್ಚಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಜಗದೇವಪ್ಪ ಭಗೋಡಿ, ಚಂದ್ರು ಕಾಶಿ, ಮಲ್ಲಿಕಾರ್ಜುನ ನಾಲವಾರ, ಸಂತೋಷ ಕಟ್ಟಿ, ಕಿಶನ್ ತಾಂಡಾ, ಮಲ್ಲಿನಾಥ ಪಾಟೀಲ, ಕಲಾವತಿ ಭೀಮಶಾ, ರವೀಂದ್ರ ತೇಲೂರ, ಸಾಬಣ್ಣ ಬಿಹರಪೇಟೆ, ಮೊಗಲಪ್ಪ ಕುಂಬಾರ, ಈಶ್ವರ ಗೊಂಡಗೋಳ, ಅಂಜುಮ್ ಖಾಜಿ, ಮಂಜೂರು ಸಾಬ್, ಮಲ್ಲಿಕಾರ್ಜುನ ಮುಗುಳಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button