ಪತಿಯ ಅನೈತಿಕ ಸಂಬಂಧದ ಆರೋಪ: ಮಹಿಳೆಗೆ ನ್ಯಾಯ ಒದಗಿಸಲು ಆಗ್ರಹ
ಜೀವನಾಂಶ, ಕಾನೂನು ರಕ್ಷಣೆ ನೀಡುವಂತೆ ಮಹಿಳಾ ಸಂಘಟನೆ ಒತ್ತಾಯ

ಪತಿಯ ಅನೈತಿಕ ಸಂಬಂಧದಿಂದ ಕುಟುಂಬ ಜೀವನ ಸಂಕಷ್ಟಕ್ಕೆ ಸಿಲುಕಿದ್ದು, ಪತ್ನಿ ಹಾಗೂ ಮಕ್ಕಳಿಗೆ ಜೀವನಾಂಶ ಮತ್ತು ಕಾನೂನು ರಕ್ಷಣೆ ಒದಗಿಸಬೇಕು ಎಂದು ಕರ್ನಾಟಕ ಅಹಿಂದ ಜನಸಂಘದ ಜಿಲ್ಲಾ ಅಧ್ಯಕ್ಷೆ ಜಯಶ್ರೀ ಎಂ. ಕಟ್ಟಿಮನಿ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಬ್ರಹ್ಮಪುರದ ನಿವಾಸಿ ಜಗದೇವಿ ಹೊಡ್ಡಿನಮನಿ ಅವರು 2017ರಲ್ಲಿ ಶರಣಬಸಪ್ಪ ಹೊಡ್ಡಿನಮನಿ ಅವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೆ ಪತಿ ಮತ್ತೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಪತ್ನಿ ಹಾಗೂ ಮಕ್ಕಳಿಗೆ ಜೀವ ಬೆದರಿಕೆ ಹಾಕುತ್ತಿರುವುದಾಗಿ ಆರೋಪಿಸಿದರು.
ಅನೈತಿಕ ಸಂಬಂಧ ಹೊಂದಿದ್ದಾರೆ ಎನ್ನಲಾದ ಮಹಿಳೆ ಸಾಮಾಜಿಕ ಜಾಲತಾಣಗಳ ಮೂಲಕ ಫೋಟೋ ಮತ್ತು ವಿಡಿಯೊಗಳನ್ನು ಹರಿಬಿಟ್ಟು ಕುಟುಂಬಕ್ಕೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು. ಅಲ್ಲದೆ, ಮನೆಗೆ ನುಗ್ಗಿ ಗ್ಯಾಸ್ ಆನ್ ಮಾಡುವುದು, ವಿದ್ಯುತ್ ಸಂಪರ್ಕಕ್ಕೆ ಅಡಚಣೆ ಉಂಟುಮಾಡುವುದು, ಬೆದರಿಕೆ ಹಾಕುವುದು ಸೇರಿದಂತೆ ಹಲವು ರೀತಿಯ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಈ ಸಂಬಂಧ ಹಲವು ಬಾರಿ ನ್ಯೂ ರಾಘವೇಂದ್ರ ಪೊಲೀಸ್ ಠಾಣೆ, ಮಹಿಳಾ ಪೊಲೀಸ್ ಠಾಣೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಸಮರ್ಪಕ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಎಫ್ಐಆರ್ ದಾಖಲಾಗಿದ್ದರೂ ಆರೋಪಿಗಳ ವಿರುದ್ಧ ಯಾವುದೇ ಪರಿಣಾಮಕಾರಿ ಕ್ರಮವಾಗಿಲ್ಲ ಎಂದು ಹೇಳಿದರು.
ಪೀಡಿತ ಮಹಿಳೆ ಆರ್ಥಿಕ ಸಂಕಷ್ಟದಲ್ಲಿದ್ದು, ಮಕ್ಕಳ ಶಿಕ್ಷಣಕ್ಕೂ ತೊಂದರೆಯಾಗುತ್ತಿದೆ. ಕಾನೂನು ಹೋರಾಟ ನಡೆಸಲು ಸಹ ಆರ್ಥಿಕ ಸಾಮರ್ಥ್ಯ ಇಲ್ಲದಿರುವ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮಧ್ಯಪ್ರವೇಶಿಸಿ ಮಹಿಳೆಗೆ ಜೀವನಾಂಶ, ಸೂಕ್ತ ರಕ್ಷಣೆ ಮತ್ತು ನ್ಯಾಯ ಒದಗಿಸಬೇಕು ಎಂದು ಜಯಶ್ರೀ ಎಂ. ಕಟ್ಟಿಮನಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಂತಾಬಾಯಿ, ದೇವೇಂದ್ರಪ್ಪ, ಪೀಡಿತ ಮಹಿಳೆ ಜಗದೇವಿ ಹೊಡ್ಡಿನಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



