ಬೈಕ್ ಟ್ಯಾಕ್ಸಿ, ಅನಧಿಕೃತ ಆಟೋಗಳ ವಿರುದ್ಧ ಆಟೋ ಚಾಲಕರ ಪ್ರತಿಭಟನೆ
ರ್ಯಾಪಿಡೋ ಸೇರಿದಂತೆ ಬೈಕ್ ಟ್ಯಾಕ್ಸಿ ಸೇವೆ ನಿಲ್ಲಿಸಲು ಆಗ್ರಹ; ಇ-ಆಟೋ ಹಾಗೂ ಅನಧಿಕೃತ ವಾಹನಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ

ನಗರದಲ್ಲಿ ರ್ಯಾಪಿಡೋ ಸೇರಿದಂತೆ ಬೈಕ್ ಟ್ಯಾಕ್ಸಿ ಸೇವೆ, ಅನಧಿಕೃತ ಆಟೋಗಳ ಸಂಚಾರ ಹಾಗೂ ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ಇ-ಆಟೋಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಆಟೋ ಚಾಲಕರ ಸಂಘದ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಆಟೋ ಚಾಲಕರು ಪ್ರತಿಭಟನೆ ನಡೆಸಿದರು.
ಸಂಘದ ಜಿಲ್ಲಾ ಅಧ್ಯಕ್ಷ ಲಕ್ಷ್ಮೀಕಾಂತ ಮಾಳಪಾಟ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಚಾಲಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ರ್ಯಾಪಿಡೋ ಸೇರಿದಂತೆ ವಿವಿಧ ಅಗ್ರಿಗೇಟರ್ ಸಂಸ್ಥೆಗಳು ವೈಟ್ ಬೋರ್ಡ್ (ನಾನ್-ಟ್ರಾನ್ಸ್‌ಪೋರ್ಟ್) ದ್ವಿಚಕ್ರ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದು, ಇದು ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.
ಹೈಕೋರ್ಟ್ ಬೈಕ್ ಟ್ಯಾಕ್ಸಿ ಸೇವೆಯನ್ನು ಸಂಪೂರ್ಣವಾಗಿ ನಿಷೇಧಿಸಿಲ್ಲ. ಆದರೆ, ಕಾನೂನುಬದ್ಧ ಪರವಾನಗಿ, ನೋಂದಣಿ ಹಾಗೂ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸ್ಪಷ್ಟಪಡಿಸಿದೆ. ಪರವಾನಗಿ ಇಲ್ಲದೆ ಸೇವೆ ನೀಡುತ್ತಿರುವ ವಾಹನಗಳ ವಿರುದ್ಧ ಸಾರಿಗೆ ಇಲಾಖೆ ಹಾಗೂ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
2025ರ ಜನವರಿ 23ರಂದು ಹೈಕೋರ್ಟ್ ವಿಭಾಗೀಯ ಪೀಠ ನೀಡಿದ ಆದೇಶದಲ್ಲಿ ವೈಟ್ ಬೋರ್ಡ್ ವಾಹನಗಳನ್ನು ವಾಣಿಜ್ಯ ಸೇವೆಗೆ ಬಳಸುವುದನ್ನು ಅನುಮತಿಸಿಲ್ಲ. ಅಲ್ಲದೆ, ಅಗ್ರಿಗೇಟರ್ ಸಂಸ್ಥೆಗಳು ಕಡ್ಡಾಯವಾಗಿ ಪರವಾನಗಿ ಪಡೆದು ಸರ್ಕಾರದ ನಿಯಮಾವಳಿಗಳಂತೆ ಸೇವೆ ನೀಡಬೇಕು ಎಂದು ನಿರ್ದೇಶಿಸಲಾಗಿದೆ. ಆದರೂ ಕೆಲವು ಸಂಸ್ಥೆಗಳು ನಿಯಮ ಉಲ್ಲಂಘಿಸಿ ಸೇವೆ ಮುಂದುವರಿಸಿರುವುದರಿಂದ ಅವುಗಳ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನಗರದಲ್ಲಿ ಇ-ಆಟೋಗಳ ಸಂಖ್ಯೆಯೂ ನಿಯಂತ್ರಣವಿಲ್ಲದೆ ಹೆಚ್ಚುತ್ತಿದ್ದು, ಎಲ್‌ಪಿಜಿ ಮತ್ತು ಸಿಎನ್‌ಜಿ ಆಟೋಗಳಿಗೆ ನೀಡಿರುವ ಮಾರ್ಗದಲ್ಲೇ ಹೆಚ್ಚಿನ ಇ-ಆಟೋಗಳು ಸಂಚರಿಸುತ್ತಿರುವುದರಿಂದ ಪರವಾನಗಿ ಪಡೆದ ಆಟೋ ಚಾಲಕರಿಗೆ ತೀವ್ರ ಆರ್ಥಿಕ ಸಂಕಷ್ಟ ಉಂಟಾಗಿದೆ ಎಂದು ಅವರು ದೂರಿದರು. ಅನಧಿಕೃತ ಇ-ಆಟೋಗಳಿಗೆ ಅವಕಾಶ ನೀಡುವುದರಿಂದ ನಿಯಮಬದ್ಧವಾಗಿ ವಾಹನ ನಡೆಸುತ್ತಿರುವ ಚಾಲಕರ ಜೀವನೋಪಾಯಕ್ಕೆ ಧಕ್ಕೆಯಾಗುತ್ತಿದೆ ಎಂದು ಹೇಳಿದರು.
ಅದೇ ರೀತಿ, ಜಿಲ್ಲೆಯ ವಿವಿಧ ಭಾಗಗಳಿಂದ ನಗರಕ್ಕೆ ಬಂದು ಅನಧಿಕೃತವಾಗಿ ಸಂಚರಿಸುತ್ತಿರುವ ಆಟೋಗಳ ವಿರುದ್ಧವೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಒಂದೇ ನೋಂದಣಿ ಸಂಖ್ಯೆಯಲ್ಲಿ ಎರಡು ವಾಹನಗಳು ಓಡುತ್ತಿರುವ ಪ್ರಕರಣಗಳನ್ನೂ ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಏಳು ದಿನಗಳೊಳಗೆ ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಕಲ್ಯಾಣ ಕರ್ನಾಟಕ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಹಾಗೂ ನೂರಾರು ಆಟೋ ಚಾಲಕರು ಭಾಗವಹಿಸಿದ್ದರು.



