ಅರುಣೋದಯ ಶಾಲೆಯಲ್ಲಿ ಗುರು ಪೂರ್ಣಿಮೆ ಆಚರಣೆ: ಪಾಲಕರು, ಗುರುಗಳಿಗೆ ವಿದ್ಯಾರ್ಥಿಗಳಿಂದ ವಂದನೆ
ಪಾದಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಗುರುವಿನ ಮಹತ್ವ ಸಾರಿದ ವಿದ್ಯಾರ್ಥಿಗಳು

ಗುರು ಪೂರ್ಣಿಮೆಯ ಅಂಗವಾಗಿ ನಗರದ ಋಷಿಕೇಶ್ ಶಿಕ್ಷಣ ಸಂಸ್ಥೆಯ ಅರುಣೋದಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಬುಧವಾರ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿ, ವಿದ್ಯಾರ್ಥಿಗಳು ತಮ್ಮ ಪಾಲಕರು ಹಾಗೂ ಗುರುಗಳಿಗೆ ವಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಂದೆ-ತಾಯಿ ಹಾಗೂ ಗುರುಗಳ ಪಾದಪೂಜೆ ನೆರವೇರಿಸಿ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ಶಾಲಾ ಆಡಳಿತ ಮಂಡಳಿ ಶಿಕ್ಷಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿತು.
ವಿದ್ಯಾರ್ಥಿಗಳಿಂದ ಅವಿಭಕ್ತ ಹಾಗೂ ವಿಭಕ್ತ ಕುಟುಂಬ ವ್ಯವಸ್ಥೆ ಕುರಿತು ಚರ್ಚಾ ಕಾರ್ಯಕ್ರಮವೂ ನಡೆಯಿತು. ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸುವ ಮೂಲಕ ಕುಟುಂಬ ಮೌಲ್ಯಗಳ ಮಹತ್ವವನ್ನು ಪ್ರತಿಪಾದಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಕೌನ್ಸಿಲ್ ಆಫ್ ಪ್ರೊಫೆಷನಲ್ ಸಿವಿಲ್ ಎಂಜಿನಿಯರ್ಸ್ ಸದಸ್ಯ ಹಾವಶೆಟ್ಟಿ ಪಾಟೀಲ ಮಾತನಾಡಿ, “ಅಕ್ಷರ, ಬದುಕು ಹಾಗೂ ಮುಕ್ತಿಯ ಮಾರ್ಗ ತೋರಿಸುವವರೇ ಗುರು” ಎಂದು ಗುರುವಿನ ಮಹತ್ವವನ್ನು ವಿವರಿಸಿದರು.
ಭಾರತೀಯ ಶಿಕ್ಷಣ ಮಂಡಳಿಯ ಕರ್ನಾಟಕ ಉತ್ತರ ಪ್ರಾಂತದ ಸಹ ಕಾರ್ಯದರ್ಶಿ ಡಾ. ಪಲ್ಲವಿ ಪಾಟೀಲ ಮಾತನಾಡಿ, ಮಕ್ಕಳಿಗೆ ಜ್ಞಾನ ನೀಡಿದ ಗುರುಗಳನ್ನು ಜೀವನದಲ್ಲಿ ಎಂದಿಗೂ ಮರೆಯಬಾರದು ಎಂದು ಹೇಳಿದರು.
ಋಷಿಕೇಶ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಸಂತೋಷಕುಮಾರ್ ಮಂಗಳೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಅಲ್ಕಾವತಿ ಹೊಸದೊಡ್ಡೆ ಕಾರ್ಯಕ್ರಮ ನಿರೂಪಿಸಿದರು. ನೀಲಮ್ಮ ಗಜಲೆ ಸ್ವಾಗತಿಸಿದರು. ಪ್ರಿಯಾಂಕ ಮಲ್ಲಾಪುರೆ ವಂದಿಸಿದರು. ಸುಮಾರು 125ಕ್ಕೂ ಹೆಚ್ಚು ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರು ಪೂರ್ಣಿಮೆಯ ಆಚರಣೆಗೆ ಸಾಕ್ಷಿಯಾದರು.



