ಜಿಲ್ಲಾಸುದ್ದಿ

ಆಸ್ತಿ ಪರಭಾರೆ ಅಕ್ರಮ ಆರೋಪ: ವಿಎಒ ದೀಪಾ, ಆರ್‌ಐ ಚಂದ್ರಶೇಖರ್ ವಜಾಕ್ಕೆ ಆಗ್ರಹ

ಸೆ.29ರಂದು ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ

ಕಲಬುರಗಿ, ಸೆ.22: ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಬಣಮಿ ಗ್ರಾಮದಲ್ಲಿ ಆಸ್ತಿ ಪರಭಾರೆಯಲ್ಲಿ ಅಕ್ರಮ ಎಸಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗ್ರಾಮ ಆಡಳಿತ ಅಧಿಕಾರಿ (ವಿಎಒ) ದೀಪಾ ಹುಗಾರ ಹಾಗೂ ಕಂದಾಯ ನಿರೀಕ್ಷಕ (ಆರ್‌ಐ) ಚಂದ್ರಶೇಖರ್ ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿ ಸೆ.29ರಂದು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ) ಯುವ ಜಿಲ್ಲಾ ಅಧ್ಯಕ್ಷ ಅಭಿಷೇಕ್ ಚಕ್ರವರ್ತಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.29ರಂದು ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಬಣಮಿ ಗ್ರಾಮದ ಜಮೀನು ಸರ್ವೆ ನಂ.77/2ರಲ್ಲಿನ 32 ಗುಂಟೆ ಜಮೀನು ಪಟ್ಟೆದಾರರಾದ ದುಂಡಪ್ಪ ತಂದೆ ಮಲ್ಲಪ್ಪ ನಾಯ್ಕೋಡಿ ಅವರಿಗೆ ಸೇರಿದ್ದು. ಅವರು ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಅವರ ಆಸ್ತಿಯನ್ನು ಅವರ ತಮ್ಮನ ಮಗ ಹನುಮಂತ ಶಿವಣ್ಣ ನಾಯ್ಕೋಡಿ ಅವರಿಗೆ ಸೇರಬೇಕಾಗಿತ್ತು. ಆದರೆ, ಸಂಬಂಧಿಕರಲ್ಲದ ಮಲ್ಲಮ್ಮ ಗಂಡ ಬಸವರಾಜ್ ಎಂಬುವರಿಗೆ ಅಕ್ರಮವಾಗಿ ಜಮೀನು ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮ ಆಡಳಿತ ಅಧಿಕಾರಿ ದೀಪಾ ಹುಗಾರ ಹಾಗೂ ಕಂದಾಯ ನಿರೀಕ್ಷಕ ಚಂದ್ರಶೇಖರ್ ವಿರುದ್ಧ ಹಲವು ಬಾರಿ ದೂರು ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.

ಅಕ್ರಮ ಆಸ್ತಿ ಪರಭಾರೆಗೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ಅವರನ್ನು ವಜಾಗೊಳಿಸಬೇಕು. ಮೃತ ಶಿವಣ್ಣ ನಾಯ್ಕೋಡಿ ಅವರ ಕುಟುಂಬದವರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅಭಿಷೇಕ್ ಚಕ್ರವರ್ತಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶರಣಪ್ಪ ಎಂ. ವಾಡೇಕರ್, ಹನುಮಂತ ನಾಯ್ಕೋಡಿ, ಶಿವರಾಜ್ ನಾಯ್ಕೋಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button