ಆರೋಗ್ಯ

ಕೈ ಕತ್ತರಿಸದೆ 6 ವರ್ಷದ ಬಾಲಕನಿಗೆ ಯಶಸ್ವಿ ಚಿಕಿತ್ಸೆ: ಅಪರೂಪದ ಮೂಳೆ ಸೋಂಕಿನ ವಿರುದ್ಧ ವೈದ್ಯರ ಸಾಧನೆ

6 ವರ್ಷಗಳಿಂದ ಚಿಕಿತ್ಸೆಗಾಗಿ ಅಲೆದಾಡಿದ್ದ ಕುಟುಂಬಕ್ಕೆ ಹೊಸ ಆಶಾಕಿರಣ; ಸ್ಪರ್ಶ ಆಸ್ಪತ್ರೆಯಲ್ಲಿ ಎಂಟು ಗಂಟೆಗಳ ಸಂಕೀರ್ಣ ಶಸ್ತ್ರಚಿಕಿತ್ಸೆ ಯಶಸ್ವಿ

ನಗರದ 6 ವರ್ಷದ ಬಾಲಕನೊಬ್ಬ ಅಪರೂಪದ ದೀರ್ಘಕಾಲದ ಮೂಳೆ ಸೋಂಕಿನಿಂದ (ಕ್ರಾನಿಕ್ ಆಸ್ಟಿಯೋಮೈಲೈಟಿಸ್) ಬಳಲುತ್ತಿದ್ದು, ಹಲವೆಡೆ ವೈದ್ಯರು ಕೈ ಕತ್ತರಿಸುವುದೇ ಪರಿಹಾರ ಎಂದು ಸೂಚಿಸಿದ್ದರೂ, ಬೆಂಗಳೂರಿನ ಆರ್.ಆರ್. ನಗರದ ಸ್ಪರ್ಶ ಆಸ್ಪತ್ರೆಯ ವೈದ್ಯರು ಕೈ ಕತ್ತರಿಸದೆ ಯಶಸ್ವಿಯಾಗಿ ಚಿಕಿತ್ಸೆ ನೀಡಿ ಬಾಲಕನ ಬದುಕಿಗೆ ಹೊಸ ಭರವಸೆ ಮೂಡಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೂಳೆ ಮತ್ತು ಸಂಧಿ ತಜ್ಞ ಡಾ. ರವಿಪ್ರಸಾದ್ ಕಟ್ಟಿಮನಿ, ಬಾಲಕನು 18 ತಿಂಗಳ ವಯಸ್ಸಿನಿಂದಲೇ ಈ ಸೋಂಕಿನಿಂದ ಬಳಲುತ್ತಿದ್ದನು. ಕಳೆದ ಆರು ವರ್ಷಗಳಿಂದ ಕರ್ನಾಟಕದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದ ಕುಟುಂಬವು ಸುಮಾರು ₹12 ರಿಂದ ₹15 ಲಕ್ಷ ವೆಚ್ಚ ಮಾಡಿ, ತಮ್ಮ ಆಸ್ತಿಯನ್ನೂ ಮಾರಾಟ ಮಾಡಿತ್ತು. ಆದರೂ ಯಾವುದೇ ಶಾಶ್ವತ ಪರಿಹಾರ ದೊರಕಿರಲಿಲ್ಲ ಎಂದು ತಿಳಿಸಿದರು.

ಸ್ಪರ್ಶ ಆಸ್ಪತ್ರೆಗೆ ಬಂದಾಗ ಬಾಲಕನ ಕೈಯ ಮೂಳೆ ತೀವ್ರವಾಗಿ ಹಾನಿಗೊಳಗಾಗಿದ್ದು, ಸೋಂಕಿನಿಂದ ರಕ್ತಸಂಚಾರವೂ ಕಡಿಮೆಯಾಗಿತ್ತು. ಇದರಿಂದ ಸಾಮಾನ್ಯ ಔಷಧಿಗಳ ಪರಿಣಾಮವೂ ಕಾಣಿಸದ ಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಕೈ ಕತ್ತರಿಸುವ ಸಲಹೆ ನೀಡಲಾಗುತ್ತದೆ. ಆದರೆ ವೈದ್ಯರ ಬಹುಶಾಖಾ ತಂಡ ಸಂಪೂರ್ಣ ಪರೀಕ್ಷೆಯ ಬಳಿಕ ಲಿಂಬ್-ಸಾಲ್ವೇಜ್ (ಕೈ ಉಳಿಸುವ) ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿತು.

ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಸ್ಪರ್ಶ ಫೌಂಡೇಶನ್ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸಿ ನೆರವಾಯಿತು. ಸುಮಾರು ಎಂಟು ಗಂಟೆಗಳ ಕಾಲ ನಡೆದ ಸಂಕೀರ್ಣ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಬಾಲಕ ಈಗ ತನ್ನ ಎರಡೂ ಕೈಗಳನ್ನು ಬಳಸುವಂತಾಗಿದ್ದಾನೆ. ಶಾಲೆಗೆ ತೆರಳಿ, ಸ್ನೇಹಿತರೊಂದಿಗೆ ಆಟವಾಡುವ ಸ್ಥಿತಿಗೆ ಮರಳಿರುವುದು ಕುಟುಂಬದಲ್ಲಿ ಸಂತಸ ಮೂಡಿಸಿದೆ.

ಸ್ಪರ್ಶ ಆಸ್ಪತ್ರೆಯ ಸಿಇಒ ಡಾ. ಸಂದೀಪ್ ಆರ್. ಮಲ್ಲಬಾದಿ ಮಾತನಾಡಿ, ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಉತ್ತಮ ಚಿಕಿತ್ಸೆ ದೊರಕುವಂತೆ ಸಂಸ್ಥೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಯಾವುದೇ ಮಗುವಿನ ಚಿಕಿತ್ಸೆಗೆ ಹಣ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಸ್ಪರ್ಶ ಫೌಂಡೇಶನ್ ಮೂಲಕ ನೆರವು ನೀಡಲಾಗುತ್ತಿದೆ ಎಂದು ಹೇಳಿದರು.

ಆರಂಭಿಕ ಹಂತದಲ್ಲಿಯೇ ಸರಿಯಾದ ತಜ್ಞರನ್ನು ಸಂಪರ್ಕಿಸಿದರೆ ಇಂತಹ ಅಪರೂಪದ ಸೋಂಕಿನಲ್ಲಿಯೂ ಅಂಗ ಕತ್ತರಿಸುವ ಪರಿಸ್ಥಿತಿ ತಪ್ಪಿಸಬಹುದು. ಆಧುನಿಕ ವೈದ್ಯಕೀಯ ತಂತ್ರಜ್ಞಾನ ಮತ್ತು ಪರಿಣಿತ ವೈದ್ಯರ ಚಿಕಿತ್ಸೆಯಿಂದ ಉತ್ತಮ ಫಲಿತಾಂಶ ಸಾಧ್ಯವೆಂದು ವೈದ್ಯರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button