ಸ್ಪರ್ಧಾತ್ಮಕ ಪರೀಕ್ಷೆ ಪೂರ್ವಭಾವಿ ತರಬೇತಿಗೆ ಅರ್ಜಿ ಆಹ್ವಾನ: ಕುರುಬ ಸಮುದಾಯದ ಅಭ್ಯರ್ಥಿಗಳಿಗೆ ಆದ್ಯತೆ
ಕನಕಶ್ರೀ ಚಾರಿಟೇಬಲ್ ಟ್ರಸ್ಟ್‌ನಿಂದ ಗುಣಮಟ್ಟದ ತರಬೇತಿ; ಇತರೆ ಸಮುದಾಯದ ಅಭ್ಯರ್ಥಿಗಳಿಗೂ ಅವಕಾಶ

ಸರ್ಕಾರಿ ಸೇವೆಯ ಕನಸು ಹೊಂದಿರುವ ಯುವಕ-ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ತರಬೇತಿ ನೀಡಲು ಕನಕಶ್ರೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ತರಬೇತಿಯಲ್ಲಿ ಕುರುಬ ಸಮುದಾಯದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಉಳಿದ ಸಮುದಾಯದ ಅಭ್ಯರ್ಥಿಗಳಿಗೂ ಪ್ರವೇಶಾವಕಾಶ ಕಲ್ಪಿಸಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಪಿ.ಎನ್. ಕೃಷ್ಣಮೂರ್ತಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಮೂಲದ ಇನ್‌ಸೈಟ್ಸ್ ಐಎಎಸ್ ಸಂಸ್ಥೆಯ ಸಹಯೋಗದಲ್ಲಿ ಈ ತರಬೇತಿ ಆಯೋಜಿಸಲಾಗುತ್ತಿದೆ. ಯುಪಿಎಸ್‌ಸಿ, ಕೆಪಿಎಸ್‌ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಇತ್ತೀಚಿನ ಮಾದರಿಯನ್ನು ಆಧರಿಸಿ ಅನುಭವಿ ಬೋಧಕರಿಂದ ಗುಣಮಟ್ಟದ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.
ಇನ್‌ಸೈಟ್ಸ್ ಐಎಎಸ್ ಸಂಸ್ಥೆಯ ತರಬೇತಿ ಪಡೆದ ಅನೇಕ ಅಭ್ಯರ್ಥಿಗಳು ಐಎಎಸ್, ಐಪಿಎಸ್, ಐಎಫ್‌ಎಸ್, ಜಿಲ್ಲಾಧಿಕಾರಿ, ಸಹಾಯಕ ಆಯುಕ್ತ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿರುವುದು ಸಂಸ್ಥೆಯ ವಿಶೇಷತೆ ಎಂದು ವಿವರಿಸಿದರು.
ಸಂಸ್ಥಾಪಕ ನಿರ್ದೇಶಕ ವಿನಯಕುಮಾರ್ ಜಿ.ಬಿ. ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಸರ್ಕಾರದ ವಿವಿಧ ಗ್ರೂಪ್–ಸಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಸತಿ ಹಾಗೂ ಸ್ಟಡಿ ಸೆಂಟರ್ ಸೌಲಭ್ಯ ಸಮೇತ ಮೂರುವರೆ ತಿಂಗಳ ಪೂರ್ವಭಾವಿ ತರಬೇತಿ ಶಿಬಿರವನ್ನು ಕನಕಶ್ರೀ ಸಂಕೀರ್ಣದಲ್ಲಿ ನಡೆಸಲಾಗುತ್ತದೆ. ಅಭ್ಯರ್ಥಿಗಳಿಂದ ಊಟ ಹಾಗೂ ವಸತಿಗಾಗಿ ಮಾಸಿಕ ₹6,000 ಮಾತ್ರ ಪಡೆಯಲಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರಿನ ವಿಶ್ವೇಶ್ವರಯ್ಯ ಬಡಾವಣೆಯಲ್ಲಿರುವ ವಸತಿ ಸೌಲಭ್ಯವೂ ಅಭ್ಯರ್ಥಿಗಳಿಗೆ ಲಭ್ಯವಿರಲಿದೆ. ತರಬೇತಿ ಶಿಬಿರ ಶೀಘ್ರದಲ್ಲೇ ಆರಂಭವಾಗಲಿದ್ದು, ಹೆಚ್ಚಿನ ಮಾಹಿತಿಗಾಗಿ 94834 25046, 98451 01696, 94485 14217, 99808 04115 ಹಾಗೂ 94480 13559 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಪದಾಧಿಕಾರಿಗಳು ವಿ. ಮುನಿಚೌಡಪ್ಪ, ರಂಗತಾಮಯ್ಯ ಪಿ. ಸೇರಿದಂತೆ ಇತರರು ಉಪಸ್ಥಿತರಿದ್ದರು.



