
ನಗರದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಐದು ವರ್ಷದ ಬಾಲಕ ಹಾಗೂ ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆಗಳು ಶುಕ್ರವಾರ ಸಂಭವಿಸಿವೆ.
ಮೊದಲ ಘಟನೆಯಲ್ಲಿ, ನಗರದ ಅಂಬಿಕಾ ನಗರದಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಐದು ವರ್ಷದ ವೇದಾಂತ್ ಎಂಬ ಬಾಲಕನಿಗೆ ಖಾಸಗಿ ಶಾಲಾ ವಾಹನ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ವೇದಾಂತ್ ಮೂಲತಃ ಸೇಡಂ ತಾಲ್ಲೂಕಿನ ಮಳಖೇಡ ಗ್ರಾಮದ ಸಂಬಣ್ಣ ಅವರ ಪುತ್ರನಾಗಿದ್ದು, ಅಜ್ಜಿಯ ಮನೆಗೆ ಬಂದಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಅಪಘಾತ ಸಂಭವಿಸಿದ ತಕ್ಷಣ ಶಾಲಾ ವಾಹನ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಘಟನೆ ಬಳಿಕ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇನ್ನೊಂದು ಘಟನೆಯಲ್ಲಿ, ನಗರದ ಹೊರವಲಯದ ಶರಣಸಿರಸಗಿ ಗ್ರಾಮದ ಸಮೀಪ ರಸ್ತೆ ದಾಟುತ್ತಿದ್ದ ಯಲ್ಲಾಲಿಂಗ ಅಳ್ಳೆ ಎಂಬ ವ್ಯಕ್ತಿಗೆ ಟಿಪ್ಪರ್ ವಾಹನ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.
ಈ ಸಂಬಂಧ ಮೃತರ ಸಂಬಂಧಿ ನಾಗೇಂದ್ರಪ್ಪ ತಂದೆ ಶಿವಣ್ಣ ಪಾಟೀಲ್ ದೂರು ನೀಡಿದ್ದು, ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎರಡೂ ಘಟನೆಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



