ಕಲಬುರಗಿಯ ರೌಡಿಶೀಟರ್ ದಮೂರ್‌ಗೆ ಬೆಂಗಳೂರಿಗೆ ಗಡಿಪಾರು
ಸಾರ್ವಜನಿಕ ಶಾಂತಿ ಕಾಪಾಡಲು ಪೊಲೀಸ್ ಆಯುಕ್ತರ ಆದೇಶ; 2011ರಿಂದ ಐದು ಪ್ರಕರಣಗಳು ದಾಖಲು

ನಗರದ ಗಣೇಶನಗರ ನಿವಾಸಿ ಹಾಗೂ ಎಂ.ಬಿ. ನಗರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ ಗುರುರಾಜ್ ತಂದೆ ದೇವೇಂದ್ರಪ್ಪ ದಮೂರ್ (38) ಅವರನ್ನು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಗುರುರಾಜ್ ದಮೂರ್ ವಿರುದ್ಧ 2011ರಿಂದ 2026ರವರೆಗೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಭಾರತೀಯ ದಂಡ ಸಂಹಿತೆ, ಸಿಆರ್‌ಪಿಸಿ ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಡಿ ಒಟ್ಟು ಐದು ಪ್ರಕರಣಗಳು ದಾಖಲಾಗಿವೆ. ಆರೋಪಿ ವಿರುದ್ಧ ಈಗಾಗಲೇ ‘ಎ’ ರೌಡಿಶೀಟ್ ತೆರೆಯಲಾಗಿದ್ದು, ಅದು ಪ್ರಸ್ತುತ ಜಾರಿಯಲ್ಲಿದೆ.
ಆರೋಪಿ ಸಾರ್ವಜನಿಕ ಸ್ಥಳಗಳಲ್ಲಿ ಗಲಾಟೆ, ಮಾರಕಾಸ್ತ್ರ ಹಿಡಿದು ಬೆದರಿಕೆ, ಹಲ್ಲೆ, ಕೊಲೆ ಯತ್ನ, ದಲಿತರ ಮೇಲಿನ ದೌರ್ಜನ್ಯ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾನೆ ಎಂದು ಪೊಲೀಸ್ ಇಲಾಖೆ ವರದಿಯಲ್ಲಿ ಉಲ್ಲೇಖಿಸಿದೆ.
ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಅವರ ನಿರ್ದೇಶನದಂತೆ, ಎಂ.ಬಿ. ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಖಾಜಾ ಪಾಶಾ ಅವರು ಕರ್ನಾಟಕ ಪೊಲೀಸ್ ಕಾಯ್ದೆ-1963ರ ಕಲಂ 55ರಡಿ ಗಡಿಪಾರು ಕ್ರಮ ಕೈಗೊಳ್ಳುವಂತೆ ವರದಿ ಸಲ್ಲಿಸಿದ್ದರು.
ಈ ವರದಿಯ ಆಧಾರದ ಮೇಲೆ ನಗರ ಪೊಲೀಸ್ ಉಪ ಆಯುಕ್ತೆ ಶಾಲಿನಿ ಅವರು ವಿಚಾರಣೆ ನಡೆಸಿ, ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಗುರುರಾಜ್ ದಮೂರ್ ಅವರನ್ನು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡುವ ಆದೇಶ ಹೊರಡಿಸಿದ್ದಾರೆ.



