ರಾಜಕೀಯ

ಜಿಬಿಜೆ ಸಭೆ ಕರೆಯಲು ಸರ್ಕಾರ ವಿಳಂಬ: ತಕ್ಷಣ ಸಭೆ ನಡೆಸುವಂತೆ ಬಸವರಾಜ್ ಮತ್ತಿಮೂಡ್ ಆಗ್ರಹ

9 ತಿಂಗಳಾದರೂ ಕಡ್ಡಾಯ ಸಭೆ ನಡೆದಿಲ್ಲ; ಕಾನೂನು ಪಾಲನೆ ಮಾಡಿ ಸಾರ್ವಜನಿಕರ ಮುಂದೆ ನಿರ್ಧಾರ ಪ್ರಕಟಿಸಬೇಕು ಎಂದು ಒತ್ತಾಯ

ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಜಾರಿಗೆ ತಂದಿರುವ ಕಾಂಗ್ರೆಸ್ ಸರ್ಕಾರವು ಬೆಂಗಳೂರು ನಗರದ ಅಭಿವೃದ್ಧಿಗೆ ಅಗತ್ಯವಾದ ಜಿಬಿಜೆ (GBJ) ಸಭೆಯನ್ನು ಕಳೆದ ಒಂಬತ್ತು ತಿಂಗಳಿನಿಂದ ನಡೆಸದೆ ನಿರ್ಲಕ್ಷ್ಯ ವಹಿಸಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ್ ಆರೋಪಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯ ಪ್ರಕಾರ ಪ್ರತಿ ಮೂರು ತಿಂಗಳಿಗೊಮ್ಮೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಜಿಬಿಜೆ ಸಭೆ ಕಡ್ಡಾಯವಾಗಿ ನಡೆಯಬೇಕು. ಆದರೆ ಮೊದಲ ಸಭೆಯ ನಂತರ ಕಳೆದ ಒಂಬತ್ತು ತಿಂಗಳಾದರೂ ಮತ್ತೊಂದು ಸಭೆಯನ್ನು ನಡೆಸಿಲ್ಲ ಎಂದು ಟೀಕಿಸಿದರು.

ಸರ್ಕಾರವು ಪ್ರಚಾರ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಬೆಂಗಳೂರಿನ ಭವಿಷ್ಯ ನಿರ್ಧರಿಸುವ ಮಹತ್ವದ ಸಭೆ ನಡೆಸಲು ಮಾತ್ರ ಸಮಯವಿಲ್ಲವೇ ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ತಕ್ಷಣವೇ ಜಿಬಿಜೆ ಸಭೆ ಕರೆಯಿಸಿ, ಕಾಯ್ದೆಯ ಅನ್ವಯ ಕೈಗೊಳ್ಳಬೇಕಾದ ಎಲ್ಲಾ ನಿರ್ಧಾರಗಳನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸಬೇಕು. ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳು, ಆಡಳಿತಾತ್ಮಕ ಕ್ರಮಗಳು ಹಾಗೂ ನಗರಾಭಿವೃದ್ಧಿಯ ಪ್ರಗತಿಯನ್ನು ಜನರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು.

ಕಾನೂನಿನ ಪ್ರಕಾರ ನಡೆಯಬೇಕಾದ ಸಭೆಯನ್ನು ನಿರಂತರವಾಗಿ ಮುಂದೂಡುವುದು ಆಡಳಿತ ವೈಫಲ್ಯದ ಸಂಕೇತವಾಗಿದೆ. ಸರ್ಕಾರ ಇದೇ ರೀತಿಯ ನಿರ್ಲಕ್ಷ್ಯ ಮುಂದುವರಿಸಿದರೆ, ಬೆಂಗಳೂರಿನ ಅಭಿವೃದ್ಧಿಗೆ ತೀವ್ರ ಹಿನ್ನಡೆಯಾಗಲಿದ್ದು, ಜನರು ಅದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಬಸವರಾಜ್ ಮತ್ತಿಮೂಡ್ ಎಚ್ಚರಿಕೆ ನೀಡಿದರು.

Related Articles

Leave a Reply

Your email address will not be published. Required fields are marked *

Back to top button