ಜಿಲ್ಲಾಸುದ್ದಿ

ಕೆಂಬಾಳೆ ಊರಿನಲ್ಲಿ “ಪ್ರಜಾ ಸೇವೆ” ಸಭೆ:ಜಿಲ್ಲೆಯ ಚೊಚ್ಚಲ ಸಭೆಯ ಯಶಸ್ಸಿಗೆ ಪೂರ್ವಸಿದ್ಧತೆ ಕೈಗೊಳ್ಳಿ-ರಾಹುಲ್ ಸಂಕನೂರ್

ಕಲಬುರಗಿ,ಸೆ.3+ ರಾಜ್ಯದ ಜನತೆಯ ಕುಂದುಕೊರತೆಗಳನ್ನು ಮತ್ತು ಅಹವಾಲುಗಳನ್ನು ಆಲಿಸಿ ಸ್ಥಳದಲ್ಲಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ “ಪ್ರಜಾ ಸೇವೆ” ಆಂದೋಲನಾ ಸಭೆ ನಡೆಸಲಾಗುತ್ತಿದೆ. ಜಿಲ್ಲೆಯ ಚೊಚ್ಚಲ ಸಭೆ ಇದೇ ಸೆ.5 ರಂದು ಕೆಂಬಾಳೆಯ ಊರು ಕಮಲಾಪೂರನಲ್ಲಿ ಆಯೋಜಿಸಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಸಿ.ಇ.ಓ ರಾಹುಲ್ ಸಂಕನೂರ್ ತಿಳಿಸಿದರು.

ಗುರುವಾರ ಕಮಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಅವರು, ರಾಜ್ಯದ ಗೃಹ, ಐ.ಟಿ-ಬಿ.ಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಜಿಲ್ಲಾ‌ ಮತ್ತು ತಾಲೂಕು ಮಟ್ಟದ ಎಲ್ಲಾ‌ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ತಾಲೂಕಿನ ವಿವಿಧ ಗ್ರಾಮಗಳಿಂದ‌ ಸಾರ್ವಜನಿಕರು ಅಗಮಿಸುವುದರಿಂದ ಅವರ ದೂರು, ಸೇವೆ ಪಡೆಯಲು ತಾಲುಕಿನ 19 ಗ್ರಾಮ ಪಂಚಾಯತಿವಾರು ಕೌಂಟರ್ ಸ್ಥಾಪಿಸಬೇಕು. ಇದಲ್ಲದೆ ಪ್ರಮುಖವಾಗಿ ಕೃಷಿ, ತೋಟಗಾರಿಕೆ, ಕಂದಾಯ, ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಸೇರಿದಂತೆ ಇತರೆ ಪ್ರಮುಖ ಇಲಾಖೆಗಳು ಸಹ ಸ್ಟಾಲ್ ಹಾಕಿ ಇಲಾಖೆ ಯೋಜನೆಗಳ ಕುರಿತು ಅರಿವು ಮೂಡಿಸುವ‌ ಕೆಲಸ ಮಾಡಬೇಕು. ಇನ್ನು ಪ್ರತಿ ಸ್ಟಾಲ್ ನಲ್ಲಿ ಕಂಪ್ಯೂಟರ್ ಅಪರೇಟರ್, ಸಿಬ್ಬಂದಿ ನಿಯೋಜಿಸಬೇಕು. ಇಂಟರನೆಟ್, ವಿದ್ಯುತ್ ವ್ಯವಸ್ಥೆ ಇರುವಂತೆಯೂ ನೋಡಿಕೊಳ್ಳಬೇಕೆಂದರು.

ತಾಲೂಕಿನ ವಿವಿದಡೆಯಿಂದ ಆಗಮಿಸುವ ಸಾರ್ವಜನಿಕರಿಗೆ ಕುಡಿಯುವ ನೀರು,‌ ಶೌಚಾಲಯದ ವ್ಯವಸ್ಥೆ ಮಾಡಬೇಕು. ಅಸನದ ವ್ಯವಸ್ಥೆ, ಶಾಮಿಯಾನ ಹಾಕಬೇಕು. ಗಣ್ಯರ, ಅಧಿಕಾರಿಗಳ, ಸಾರ್ವಜನಿಕರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಪೊಲೀಸ್ ಭದ್ರತೆ ಕಲ್ಪಿಸಬೇಕು ಎಂದು ರಾಹುಲ್‌ ಸಂಕನೂರ್ ಅವರು, ಇಂದು ಸಂಜೆಯೊಳಗೆ ಕಾರ್ಯಕ್ರಮದ ಬ್ಲೂಪ್ರಿಂಟ್ ಸಿದ್ಧಪಡಿಸಿಕೊಂಡು ಬರುವಂತೆ ಇವೆಂಟ್ ಮ್ಯಾನೇಜರ್ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಅಪರ‌ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಮಾತನಾಡಿ ಸಭೆಗೆ ಆಗಮಿಸುವ ಸಾರ್ವಜನಿಕರಿಗೆ ಅರ್ಜಿ ಬರೆದುಕೊಡಲು ಸಹಾಯ ಮಾಡಲು ಮತ್ತು ಜನರನ್ನು ನಿಯಂತ್ರಿಸಲು ಅಗತ್ಯ ಸ್ವಯಂ ಸೇವಕರನ್ನು ನಿಯೋಜಿಸಬೇಕು ಎಂದರಲ್ಲದೆ ಐ.ಇ.ಸಿ ಜಾಗೃತಿಗೆ ಸ್ಟಾಲ್ ಹಾಕಲು ಉದ್ದೇಶಿಸಿದಲ್ಲಿ ಅಂತಹ ಇಲಾಖೆಗಳು ಗುರುವಾರ ಸಂಜೆಯೊಳಗೆ ಮಾಹಿತಿ ನೀಡುವಂತೆ ಸೂಚಿಸಿದರು.ಸಭೆಯಲ್ಲಿ ಎಸ್.ಪಿ. ಅಡ್ಡೂರು ಶ್ರೀನಿವಾಸುಲು, ಕಮಲಾಪೂರ ತಹಶೀಲ್ದಾರ ಮೊಹಮ್ಮದ ಮೋಹಸೀನ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅನೇಕ ಅಧಿಕಾರಿಗಳಿದ್ದರು.

Related Articles

Leave a Reply

Your email address will not be published. Required fields are marked *

Back to top button