ಜಿಲ್ಲಾಸುದ್ದಿ

ಎಫ್‌ಐಆರ್ ಆದರೂ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ಹಿಂದೇಟು..!

ಕೆಪಿಎಂಇ ಕಾಯ್ದೆ ಕಾಗದಕ್ಕೆ ಸೀಮಿತ: ಅಂಬಾಜಿ ಮೇಟಿ ಆರೋಪ

ಕಲಬುರ್ಗಿ, ಜು.4- ಜಿಲ್ಲೆಯಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಅನುಷ್ಠಾನದ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ. ಒಂದು ಕಡೆ ತಾಲ್ಲೂಕು ಆರೋಗ್ಯಾಧಿಕಾರಿಗಳೇ ಕೆಲವು ಖಾಸಗಿ ಆಸ್ಪತ್ರೆಗಳ ವಿರುದ್ಧ ಕೆಪಿಎಂಇ ಕಾಯ್ದೆಯಡಿ ಎಫ್‌ಐಆರ್ ದಾಖಲಿಸುತ್ತಾರೆ; ಮತ್ತೊಂದೆಡೆ ಅದೇ ಆಸ್ಪತ್ರೆಗಳು ಯಾವುದೇ ಆಡಳಿತಾತ್ಮಕ ಪರಿಣಾಮವಿಲ್ಲದೆ ಯಥಾಪ್ರಕಾರ ಕಾರ್ಯನಿರ್ವಹಿಸುತ್ತಿವೆ. ಈ ಪರಿಸ್ಥಿತಿ ಕಾನೂನಿನ ಸಮಾನ ಅನುಷ್ಠಾನದ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ ಎಂದು ಭೀಮಶಕ್ತಿ ಅಧ್ಯಕ್ಷ ಅಂಬಾಜಿ ಪಿ. ಮೇಟಿ ಅವರು ಕಳವಳ ವ್ಯಕ್ತಪಡಿಸಿದರು.


ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್. ಪಟೇಲ್ ಜನರಲ್ ಆಂಡ್ ಮೆಟರ್ನಿಟಿ ಆಸ್ಪತ್ರೆ ವಿರುದ್ಧ ಕೆಪಿಎಂಇ ದಾಖಲಾಗಿರುವುದು ಅಧಿಕೃತ ದಾಖಲೆಗಳಲ್ಲಿದೆ. ಆದಾಗ್ಯೂ, ಎಫ್‌ಐಆರ್ ದಾಖಲಾದ ನಂತರ ಆಸ್ಪತ್ರೆಗಳ ಕೆಪಿಎಂಇ ನೋಂದಣಿ, ಪರವಾನಗಿ, ದಾಖಲೆಗಳು ಮತ್ತು ಕಾನೂನುಬದ್ಧ ಕಾರ್ಯಾಚರಣೆ ಕುರಿತು ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಜಿಲ್ಲಾಡಳಿತ ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.


ಕಳೆದ ಜೂನ್ 18ರಂದು ಆಸ್ಪತ್ರೆಗೆ ತಪಾಸಣೆ ನಡೆಸಿದ ತಾಲ್ಲೂಕು ಆರೋಗ್ಯಾಧಿಕಾರಿಗಳೇ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಆಯುಷ್ ವೈದ್ಯರು ಅಲೋಪತಿ ಚಿಕಿತ್ಸೆ ನೀಡಿರುವ ಆರೋಪ ಉಲ್ಲೇಖವಾಗಿದೆ. ಹಾಗಿದ್ದರೆ ವೈದ್ಯರ ವಿದ್ಯಾರ್ಹತೆ ಮತ್ತು ನೋಂದಣಿ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿದೆ ನಿಜವಾಗಿದ್ದರೆ ಸಂಬಂಧಿತ ದಾಖಲೆಗಳನ್ನು ಯಾಕೆ ಪಡೆದಿಲ್ಲ ಕೊಂಡು ಕಡತಕ್ಕೆ ಯಾಕೆ ಸೇರಿಸಿಲ್ಲ? ಆಸ್ಪತ್ರೆಯ ಕೆಪಿಎಂಇ ಅಡಿ ನೋಂದಣಿ ಆಗಿದೆ ಎಂದು ತೋರಿಸಲಾಗಿದೆ ಆ ಪ್ರಮಾಣ ಪತ್ರ ಎಲ್ಲಿ ಹೋಯಿತ್ತು ಮತ್ತು ಆನ್‌ಲೈನ್ ನಲ್ಲಿ ನೊಂದಣಿ ಕುರಿತು ಹುಡುಕಿದ್ದರೆ, ಈ ಕುರಿತು ಮಾಹಿತಿ ತೋರಿಸುತ್ತಿಲ್ಲ. ಇಲ್ಲಿ ಮತ್ಯಾವ ಈ ಹೆರಾಫೇರಿ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಉತ್ತರಿಸಬೇಕು ಎಂದು ಅವರು ಆಗ್ರಹಿಸಿದರು.


ಅದೇ ರೀತಿಯಲ್ಲಿ ರಹೀಮ್ ಪಟೇಲ್ ವೈದ್ಯರು ಬರೆದು ಕೊಟ್ಟ ಇಂಜೆಕ್ಷನ್‌ನಿಂದಾಗಿ ಜೂನ್ 15ರಂದು ಶೇಖ್ ರೋಜಾ ಆಶ್ರಯ ಕಾಲೋನಿ ಮಹಿಳೆಯೊಬ್ಬರ ಅನುಮಾನಾಸ್ಪದ ಸಾವಿನ ಘಟನೆಗೆ ಸಂಬಂಸಿದಂತೆ ಎಫ್‌ಐಆರ್‌ನಲ್ಲಿ ಪ್ರಸ್ತಾಪಿಸಿಲ್ಲ ಹಾಗೂ ಈ ಕುರಿತು ಯಾವುದೇ ತನಿಖೆ ಮಾಡಿರುವ ಬಗ್ಗೆ ಉಲ್ಲೇಖಿಸಿಲ್ಲ. ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲಾ ಆರೋಗ್ಯ ಇಲಾಖೆ ಸ್ವಯಂ ಪ್ರೇರಿತವಾಗಿ ಕೇಸ್ ದಾಖಲಿಸಿಕೊಂಡು ತನಿಖೆ ಮಾಡಬೇಕಾಗಿತ್ತು ಅಥವಾ ಪ್ರತ್ಯೇಕವಾಗಿ ತನಿಖೆ ನಡೆಯುತ್ತಿದೆಯೇ ಎಂಬ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಅವರು ಒತ್ತಾಯಿಸಿದರು.


ಇದೇ ವೇಳೆ ಮಾಹಿತಿ ಹಕ್ಕು ಕಾಯ್ದೆಯಡಿ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಯಿಂದ ಪಡೆದಿರುವ ಕೆಪಿಎಂಇ ನೋಂದಣಿ ಪಟ್ಟಿಯನ್ನು ಪರಿಶೀಲಿಸಿದಾಗ ಹಲವಾರು ಕ್ಲಿನಿಕ್‌ಗಳು, ವೈದ್ಯಕೀಯ ಸಂಸ್ಥೆಗಳ ನೋಂದಣಿಯಾಗಿರುವ ಕುರಿತು ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಇದರಿಂದ ಸದರಿ ಆಸ್ಪತ್ರೆಗಳು ನೊಂದಣಿಯಾಗಿವೆಯೋ ಇಲ್ಲವೋ ಅಥವಾ ನಕಲಿ ವೈದ್ಯರೇ ಎಂಬ ಕುರಿತು ಗಂಭೀರವಾದ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.


ನಗರದ ಉದನೂರು ವರ್ತುಲ ರಸ್ತೆಯ ಡಾ. ಎ.ಎಸ್. ಹಿರೇಮಠರ ಶ್ರೀ ಗುರು ಪಾಲಿ, ಬಿದ್ದಾಪುರ ಕಾಲೋನಿಯ ಡಾ. ಜ್ಯೋತಿ ಪಿ. ಬಿರಾದಾರ್ ಅವರ ಮಲ್ಲಿಕಾರ್ಜುನ್ ಕ್ಲಿನಿಕ್, ಉದನೂರು ಕ್ರಾಸ್‌ನ ಡಾ. ಸಂತೋಷ್ ಎವರ್ ಟೆಂಗಳಿ ಅವರ ಅದ್ಯಾ ಕ್ಲಿನಿಕ್, ಅಂಬಿಕಾ ನಗರದ ಹೌಸಿಂಗ್ ಬೋರ್ಡ್ ಕಾಲೋನಿಯ ನಿಮಾ ಕಾಲೋನಿಯ ಮುಖ್ಯ ರಸ್ತೆಯಲ್ಲಿರುವ ಡಾ. ಜೇಬಾ ಸುಲ್ತಾನಾ ಅವರ ಕೇರ್ ಪಾಯಿಂಟ್ ಕ್ಲಿನಿಕ್, ಡಾ. ರಫತ್ ಸುಲ್ತಾನಾ ಅವರ ಹೋಮಿಯೋಪತಿ ಕ್ಲಿನಿಕ್, ರಹಮತ್ ನಗರದ ಪಿಆಂಡ್‌ಟಿ ಕಾಲೋನಿ ಹತ್ತಿರದ ಡಾ. ಮಾರ್ಗೇಶ್ ಪುರೋಹಿತ್ ಅವರ ಆಸ್ಪತ್ರೆ, ತಾರಫೈಲ್‌ನ ರೈಲ್ವೆ ನಿಲ್ದಾಣದ ಹಿಂದುಗಡೆ ಇರುವ ಗೌಸ್‌ನಗರದ ಆದರ್ಶ ಮಾರ್ಗದ ಡಾ. ಮಂಜು ಪವಾರ್ ಅವರ ಮೆಡಕ್ಯೂರ್ ಆಸ್ಪತ್ರೆ ಮುಂತಾದವುಗಳ ಕುರಿತು ಕೆಪಿಎಂಇ ಕಾಯ್ದಯಡಿ ನೊಂದಣಿ, ಸಂಬಂಧಿಸಿದ ವೈದ್ಯರ ವಿದ್ಯಾರ್ಹತೆ, ವೈದ್ಯಕೀಯ ನೊಂದಣಿ ದಾಖಲೆಗಳು ಕುರಿತು ಆರೋಗ್ಯ ಇಲಾಖೆ ತಕ್ಷಣ ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದರು.


ಕೆಲವು ಕ್ಲಿನಿಕ್‌ಗಳು ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯಿಂದ ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿಯೇ ಕಾರ್ಯನಿರ್ವಹಿಸುತ್ತಿವೆ ಆದರೂ ತಪಾಸಣೆ ಮತ್ತು ಕಾನೂನು ಕ್ರಮ ಜರುಗಿಸದೇ ಇರಲು ಬಲವಾದ ಕಾರಣವೇನು? ಎಂಬ ಕುರಿತು ಸಾರ್ವಜನಿಕರಲ್ಲಿ ಪ್ರಶ್ನೆ ಉದ್ಭವವಾಗಿದೆ. ಆದ್ದರಿಂದ ಸಂಬಂಧಿತ ಅಧಿಕಾರಿಗಳು ಈ ಪ್ರಶ್ನೆಗಳಿಗೆ ಉತ್ತರ ನೀಡಿ, ವಾಸ್ತವಾಂಶವನ್ನು ಸಾರ್ವಜನಿಕರ ಮುಂದೆ ಇಡಬೇಕು. ಜಿಲ್ಲಾ ಮಟ್ಟದ ತನಿಖೆಗೆ ಸೀಮಿತಗೊಳಿಸದೆ, ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸ್ವತಂತ್ರ, ನಿಷ್ಪಕ್ಷಪಾತ ತನಿಖೆ ಮಾಡಬೇಕು ಹಾಗೂ ತನಿಖೆ ಪೂರ್ಣಗೊಳ್ಳುವವರೆಗೆ, ಸಾರ್ವಜನಿಕರ ಆರೋಗ್ಯ ಮತ್ತು ರೋಗಿಗಳ ಸುರಕ್ಷತೆಯ ಹಿತದೃಷ್ಟಿಯಿಂದ, ಆಸ್ಪತ್ರೆಯ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.


ಚಿಕಿತ್ಸೆ ಅಥವಾ ಇಂಜೆಕ್ಷನ್‌ಗೆ ಸಂಬಂಧಿಸಿದಂತೆ ಮಹಿಳೆಯೊಬ್ಬರ ಅನುಮಾನಾಸ್ಪದ ಸಾವಿನ ಘಟನೆಯನ್ನು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಬೇಕು. ವೈದ್ಯ ರಹೀಮ್ ಪಟೇಲ್ ಹಾಗೂ ಸ್ಟಾಪ್ ನರ್ಸ್ ವಿರುಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

Related Articles

Leave a Reply

Your email address will not be published. Required fields are marked *

Back to top button