
ಕಲಬುರಗಿ, ಆ.1: ಯುವಜನತೆ ಮಾದಕ ವಸ್ತುಗಳು, ತಂಬಾಕು, ಮದ್ಯಪಾನ ಹಾಗೂ ಡಿಜಿಟಲ್ ವ್ಯಸನಗಳಿಂದ ದೂರವಿದ್ದು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಎಸ್.ಡಿ. ಶರಣಪ್ಪ ಕರೆ ನೀಡಿದರು.
ನಗರದ ಆದರ್ಶ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಇಲಾಖೆ, ಜಿಮ್ಸ್ ಆಸ್ಪತ್ರೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಶ್ರೀ ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕವನ್ನು ಹಾಗೂ ಕಲಬುರಗಿ ನಗರವನ್ನು ಮಾದಕ ವಸ್ತು ಮುಕ್ತವಾಗಿಸಲು ಪೊಲೀಸ್ ಇಲಾಖೆ ‘ಆಪರೇಷನ್ ರೈಸ್ (RISE)’ ಮತ್ತು ‘ಬೇಡ ಬ್ರೋ’ ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದೆ. ಮಾದಕ ವಸ್ತುಗಳ ನಿರ್ಮೂಲನೆ ಕೇವಲ ಪೊಲೀಸ್ ಇಲಾಖೆಯಿಂದ ಸಾಧ್ಯವಿಲ್ಲ. ಇದಕ್ಕೆ ಯುವಜನತೆ, ಸಾರ್ವಜನಿಕರು ಹಾಗೂ ಸಮುದಾಯದ ಸಕ್ರಿಯ ಸಹಭಾಗಿತ್ವ ಅಗತ್ಯ ಎಂದು ಹೇಳಿದರು.
ಶ್ರೀ ಮಹಾಂತ ಶಿವಯೋಗಿಗಳು ಸಮಾಜ ಸುಧಾರಕರಾಗಿದ್ದು, ದುಶ್ಚಟಗಳ ವಿರುದ್ಧ ಹೋರಾಡಿದ ಮಹನೀಯರು. ಅವರ ಆದರ್ಶಗಳು ಇಂದಿನ ಸಮಾಜಕ್ಕೂ ಮಾರ್ಗದರ್ಶಿಯಾಗಿದ್ದು, ಯುವ ಸಮುದಾಯವನ್ನು ವ್ಯಸನಗಳಿಂದ ರಕ್ಷಿಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಮೊಬೈಲ್, ಸಾಮಾಜಿಕ ಜಾಲತಾಣಗಳು ಹಾಗೂ ಒಟಿಟಿ ವೇದಿಕೆಗಳ ಅತಿಯಾದ ಬಳಕೆ ಯುವಜನರಲ್ಲಿ ಡಿಜಿಟಲ್ ವ್ಯಸನವನ್ನು ಹೆಚ್ಚಿಸುತ್ತಿದೆ. ಜೊತೆಗೆ ತಂಬಾಕು, ಮದ್ಯಪಾನ ಹಾಗೂ ಮಾದಕ ವಸ್ತುಗಳ ಬಳಕೆ ಅವರ ಶೈಕ್ಷಣಿಕ ಮತ್ತು ವೈಯಕ್ತಿಕ ಬದುಕಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಅವರು ಎಚ್ಚರಿಸಿದರು.
ಮಾದಕ ವಸ್ತುಗಳ ವಿರುದ್ಧ ತಡೆಗಟ್ಟುವಿಕೆ, ಪತ್ತೆ ಹಚ್ಚುವಿಕೆ ಹಾಗೂ ಪುನರ್ವಸತಿ ಎಂಬ ತ್ರಿಕೋನ ತತ್ವದಡಿ ಕಾರ್ಯ ನಡೆಯುತ್ತಿದ್ದು, ವಿದ್ಯಾರ್ಥಿಗಳು ವ್ಯಸನಮುಕ್ತ ಸಮಾಜದ ರಾಯಭಾರಿಗಳಾಗಬೇಕು ಎಂದರು. ಅನುಮಾನಾಸ್ಪದ ಮಾದಕ ವಸ್ತುಗಳ ಮಾರಾಟ ಅಥವಾ ಸೇವನೆ ಕಂಡುಬಂದರೆ ತಕ್ಷಣ 112 ತುರ್ತು ಸಹಾಯವಾಣಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಮೂರು ವರ್ಷಗಳಲ್ಲಿ 700ಕ್ಕೂ ಹೆಚ್ಚು ಪ್ರಕರಣ
ಕಳೆದ ಮೂರು ವರ್ಷಗಳಲ್ಲಿ ಕಲಬುರಗಿಯಲ್ಲಿ ಮಾದಕ ವಸ್ತು ಜಾಲಕ್ಕೆ ಸಂಬಂಧಿಸಿದಂತೆ 700ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದುವರೆಗೆ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿತ್ತು. ಇನ್ನು ಮುಂದೆ ಮಾದಕ ವಸ್ತುಗಳನ್ನು ಸೇವಿಸುವವರ ಮೇಲೆಯೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದರು.
ವ್ಯಸನದಿಂದ ಭವಿಷ್ಯ ಹಾಳಾಗುತ್ತದೆ: ಡಾ. ಪ್ರಭು ಕಿರಣ್
ಜಿಮ್ಸ್ ಆಸ್ಪತ್ರೆಯ ಮನೋವೈದ್ಯ ಡಾ. ಪ್ರಭು ಕಿರಣ್ ವಿಶೇಷ ಉಪನ್ಯಾಸ ನೀಡಿ, ಯುವ ವಯಸ್ಸಿನಲ್ಲಿ ಮೆದುಳು ಅತ್ಯಂತ ಚುರುಕಾಗಿದ್ದು, ಅದನ್ನು ಉತ್ತಮ ದಿಕ್ಕಿನಲ್ಲಿ ರೂಪಿಸಿದರೆ ಯಶಸ್ವಿ ಜೀವನ ಕಟ್ಟಿಕೊಳ್ಳಬಹುದು. ಆದರೆ ದುಶ್ಚಟಗಳಿಗೆ ಬಲಿಯಾದರೆ ಭವಿಷ್ಯ ಹಾಳಾಗುತ್ತದೆ ಎಂದು ಹೇಳಿದರು.
ಆರಂಭದಲ್ಲಿ ಕುತೂಹಲ ಅಥವಾ ತಮಾಷೆಗಾಗಿ ಆರಂಭವಾಗುವ ಧೂಮಪಾನ, ಮದ್ಯಪಾನ ಹಾಗೂ ಮಾದಕ ವಸ್ತುಗಳ ಬಳಕೆ ಕ್ರಮೇಣ ವ್ಯಸನವಾಗಿ ವ್ಯಕ್ತಿಯನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತದೆ. ಹಣದ ಕೊರತೆಯಿಂದ ಕಳವು ಸೇರಿದಂತೆ ಅಪರಾಧ ಚಟುವಟಿಕೆಗಳತ್ತ ಯುವಜನರನ್ನು ತಳ್ಳುವ ಅಪಾಯವೂ ಇದೆ ಎಂದು ಎಚ್ಚರಿಸಿದರು.
ಮೊಬೈಲ್ ಗೇಮ್ಗಳು, ಸಾಮಾಜಿಕ ಜಾಲತಾಣಗಳು ಹಾಗೂ ಮಾದಕ ವಸ್ತುಗಳು ಮೆದುಳಿನಲ್ಲಿ ಡೋಪಮಿನ್ ಪ್ರಮಾಣವನ್ನು ಕೃತಕವಾಗಿ ಹೆಚ್ಚಿಸಿ ಕ್ಷಣಿಕ ಸಂತೋಷ ನೀಡುತ್ತವೆ. ಇದರಿಂದ ಯುವಜನರು ಓದು ಹಾಗೂ ಶ್ರಮದಿಂದ ದೂರ ಸರಿಯುವ ಸಾಧ್ಯತೆ ಇದೆ. ವ್ಯಸನಕ್ಕೆ ಒಳಗಾದವರು ಮುಚ್ಚಿಡದೆ ಶಿಕ್ಷಕರು, ಪೋಷಕರು, ಕೌನ್ಸಿಲರ್ ಅಥವಾ ಮನೋವೈದ್ಯರ ನೆರವು ಪಡೆಯಬೇಕು. “ಸಹಾಯ ಕೇಳುವುದು ಎಂದಿಗೂ ದೌರ್ಬಲ್ಯವಲ್ಲ” ಎಂದು ಅವರು ತಿಳಿಸಿದರು.
ಜಾಗೃತಿ ಜಾಥಾ ಮತ್ತು ವ್ಯಸನಮುಕ್ತ ಶಿಬಿರ
ವ್ಯಸನ ಮುಕ್ತ ದಿನಾಚರಣೆ ಅಂಗವಾಗಿ ಜಿಲ್ಲಾ ಆಸ್ಪತ್ರೆಯಿಂದ ಜಗತ್ ಸರ್ಕಲ್ವರೆಗೆ ಜಾಗೃತಿ ಜಾಥಾ ನಡೆಸಲಾಯಿತು. ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ಅಸ್ನಾ ರಬಾ ರುಕಿಯಾ ಜಾಥಾಕ್ಕೆ ಚಾಲನೆ ನೀಡಿದರು. ನರ್ಸಿಂಗ್ ವಿದ್ಯಾರ್ಥಿಗಳು ವ್ಯಸನ ವಿರೋಧಿ ಘೋಷಣೆಗಳನ್ನು ಕೂಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಕಾಲೇಜು ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ವ್ಯಸನಮುಕ್ತ ಶಿಬಿರ ಆಯೋಜಿಸಿ ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆ, ಮಾಹಿತಿ ಹಾಗೂ ಕರಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಂಯೋಜಕಿ ಸುಜಾತಾ ಪಾಟೀಲ ವ್ಯಸನ ತ್ಯಜಿಸುವ ಪ್ರತಿಜ್ಞೆ ಬೋಧಿಸಿದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಾಮಾಜಿಕ ಕಾರ್ಯಕರ್ತ ನಾಗರಾಜ ಬಿರಾದಾರ ಸಹಾಯವಾಣಿ ಕುರಿತು ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ರಾಜು ಗಂಗಾಧರ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಶಿಕ್ಷಣ (ಪದವಿ ಪೂರ್ವ) ಉಪನಿರ್ದೇಶಕ ದೇವನಗೌಡ ಪಾಟೀಲ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸೋಮು ರಾಠೋಡ, ಉಪನ್ಯಾಸಕರು ಹಾಗೂ ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ವಿಠ್ಠಲ ಭಾವಿಮನಿ ಕಾರ್ಯಕ್ರಮ ನಿರೂಪಿಸಿದರು.



