ಜಿಲ್ಲಾಸುದ್ದಿ

ರಸ್ತೆ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ: ಜಿಲ್ಲಾಧಿಕಾರಿ ಇಕ್ರಂ ಶರೀಫ್

ಮಿತಿಮೀರಿದ ಸರಕು ಸಾಗಣೆ, ಅತಿವೇಗ ಹಾಗೂ ಅವೈಜ್ಞಾನಿಕ ಗತಿರೋಧಕಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ

ಕಲಬುರಗಿ, ಆ.12: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಗಟ್ಟುವ ಜೊತೆಗೆ ಹೆದ್ದಾರಿಗಳಲ್ಲಿ ಸುಗಮ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಮಿತಿಮೀರಿದ ಸರಕು ಸಾಗಣೆ ಹಾಗೂ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಇಕ್ರಂ ಶರೀಫ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಮಾರ್ಗದರ್ಶನದಂತೆ ರಸ್ತೆ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಚಿತ್ತಾಪುರ, ಸೇಡಂ, ವಾಡಿ ಹಾಗೂ ಜೇವರ್ಗಿ ಭಾಗಗಳಲ್ಲಿನ ಗಣಿ ಮತ್ತು ಕ್ವಾರಿಗಳಿಂದ ಮಿತಿಮೀರಿದ ಭಾರ ಹೊತ್ತು ಸಂಚರಿಸುವ ಲಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲ ಗಣಿ ಮತ್ತು ಕ್ವಾರಿಗಳ ಪ್ರವೇಶ ಹಾಗೂ ನಿರ್ಗಮನ ದ್ವಾರಗಳಲ್ಲಿ 15 ದಿನಗಳೊಳಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ಅವುಗಳ ನೇರ ಸಂಪರ್ಕವನ್ನು ಆರ್‌ಟಿಒ ಹಾಗೂ ಪೊಲೀಸ್ ಅಧಿಕಾರಿಗಳ ಮೊಬೈಲ್‌ಗಳಿಗೆ ಕಲ್ಪಿಸಬೇಕು ಎಂದು ಸೂಚಿಸಿದರು.

ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳನ್ನು ಜಪ್ತಿ ಮಾಡುವುದರೊಂದಿಗೆ ಎಫ್‌ಐಆರ್ ದಾಖಲಿಸಬೇಕು. ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಕ್ವಾರಿ ಪರವಾನಗಿಯನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶಿಸಿದರು.

ಹೆದ್ದಾರಿಗಳಲ್ಲಿ ಅತಿವೇಗವಾಗಿ ಸಂಚರಿಸುವ ವಾಹನಗಳನ್ನು ಪತ್ತೆಹಚ್ಚಲು ವೇಗ ಪತ್ತೆ ಸಾಧನಗಳು ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಸಮರ್ಪಕವಾಗಿ ಬಳಸಬೇಕು. ಕೆಎಸ್‌ಆರ್‌ಟಿಸಿ ಬಸ್‌ಗಳು, ಲಾರಿಗಳು ಹಾಗೂ ಸಿಮೆಂಟ್ ಕಾರ್ಖಾನೆಗಳ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಸಿರುವುದನ್ನು ಖಚಿತಪಡಿಸಿಕೊಳ್ಳಲು ಸಾರಿಗೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿ ತಪಾಸಣೆ ನಡೆಸಬೇಕು ಎಂದರು.

ಹೆದ್ದಾರಿ ಬದಿಯಲ್ಲಿ ಭಾರಿ ವಾಹನಗಳ ಅಸ್ತವ್ಯಸ್ತ ಪಾರ್ಕಿಂಗ್ ತಡೆಯಲು ಸೇಡಂ, ಚಿತ್ತಾಪುರ ಹಾಗೂ ಸಿರಸಗಿ ಭಾಗಗಳಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಲು ಸೂಕ್ತ ಜಾಗ ಗುರುತಿಸಿ ಪ್ರಸ್ತಾವನೆ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು. ವಾಹನಗಳ ತೂಕ ಪರಿಶೀಲನೆಗಾಗಿ ಹೊಸ ಡಿಜಿಟಲ್ ತೂಕಮಾಪನ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ನಗರದಲ್ಲಿ ಬೆಳಿಗ್ಗೆ 7ರಿಂದ ರಾತ್ರಿ 10ರವರೆಗೆ ಭಾರಿ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ನಿಯಮ ಪಾಲನೆ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ದಿನಕ್ಕೆ 40 ಸಾವಿರಕ್ಕೂ ಹೆಚ್ಚು ವಾಹನಗಳ ಸಂಚಾರವಿರುವ ಹುಮನಾಬಾದ್ ಕ್ರಾಸ್‌ನಿಂದ ಅಫಜಲಪುರ ಕ್ರಾಸ್‌ವರೆಗಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ವಹಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಮುಂದಿನ 30 ದಿನಗಳೊಳಗಾಗಿ ಜಿಲ್ಲಾದ್ಯಂತ ರಸ್ತೆ ಸುರಕ್ಷತಾ ಪರಿಶೀಲನೆ ನಡೆಸಿ ಅಪಘಾತ ಸಂಭವಿಸುವ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಸುಧಾರಿಸಬೇಕು. ಭಾರತೀಯ ರಸ್ತೆ ಕಾಂಗ್ರೆಸ್ ನಿಯಮಗಳಿಗೆ ವಿರುದ್ಧವಾಗಿ ನಿರ್ಮಿಸಿರುವ ಅವೈಜ್ಞಾನಿಕ ಗತಿರೋಧಕಗಳನ್ನು ತಕ್ಷಣ ತೆರವುಗೊಳಿಸಿ, ಅಗತ್ಯವಿರುವ ಕಡೆ ರೇಡಿಯಂ ಪ್ರತಿಫಲಕಗಳು ಹಾಗೂ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು. ಈ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳು ವಿಶೇಷ ಆದ್ಯತೆ ನೀಡಬೇಕು ಎಂದು ನಿರ್ದೇಶಿಸಿದರು.

ಖಾಸಗಿ ಆಂಬ್ಯುಲೆನ್ಸ್‌ಗಳ ತಪಾಸಣೆಗಾಗಿ ಉಪಸಮಿತಿ ರಚಿಸುವಂತೆ ಹಾಗೂ ನಗರ ವ್ಯಾಪ್ತಿಯ ಬೀದಿ ದೀಪಗಳ ಪರಿಶೀಲನೆ ನಡೆಸುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಪ್ರಾಣಹಾನಿ ತಡೆಯುವುದೇ ರಸ್ತೆ ಸುರಕ್ಷತಾ ಕ್ರಮಗಳ ಪ್ರಮುಖ ಉದ್ದೇಶವಾಗಿದ್ದು, ರಸ್ತೆ ದುರಸ್ತಿ ಕಾಮಗಾರಿಯಲ್ಲಿ ಕಳಪೆ ಕಾಮಗಾರಿ ಅಥವಾ ವಿಳಂಬ ಕಂಡುಬಂದರೆ ನೇರವಾಗಿ ಎಫ್‌ಐಆರ್ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡರೂ ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ, ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಆನಂದ್ ಪ್ರಾರ್ಥನಳ್ಳಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ರಾಹುಲ್ ಕಾಂಬ್ಳೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button