ಖರ್ಗೆ ಕಲಬುರಗಿ ಪ್ರವಾಸ: ಸಚಿವಾಕಾಂಕ್ಷಿಗಳಲ್ಲಿ ಮತ್ತೆ ಚಿಗುರಿದ ಸಂಪುಟ ಕನಸು
ಬಿ.ಆರ್. ಪಾಟೀಲ್, ಡಾ. ಅಜಯಸಿಂಗ್, ತಿಪ್ಪಣ್ಣಪ್ಪ ಕಮಕನೂರ್ ಸೇರಿದಂತೆ ಹಲವು ನಾಯಕರ ಬೆಂಬಲಿಗರಲ್ಲಿ ಹೆಚ್ಚಿದ ನಿರೀಕ್ಷೆ

ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರು ಮೂರು ದಿನಗಳ ಭೇಟಿಗಾಗಿ ಕಲಬುರಗಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಹೊಸ ಚರ್ಚೆಗಳು ಆರಂಭವಾಗಿವೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ಕುರಿತು ಹಲವು ನಾಯಕರು ಮತ್ತು ಅವರ ಬೆಂಬಲಿಗರಲ್ಲಿ ನಿರೀಕ್ಷೆಗಳು ಹೆಚ್ಚಾಗಿವೆ.
ಜುಲೈ 10 ಮತ್ತು 11ರಂದು ಕಲಬುರಗಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವ ಖರ್ಗೆ ಅವರನ್ನು ಭೇಟಿ ಮಾಡಲು ಹಲವು ಕಾಂಗ್ರೆಸ್ ಮುಖಂಡರು ಮುಂದಾಗಿದ್ದು, ಸಚಿವ ಸ್ಥಾನಕ್ಕಾಗಿ ತಮ್ಮ ಅಭಿಪ್ರಾಯ ಮತ್ತು ಬೆಂಬಲವನ್ನು ವರಿಷ್ಠರ ಗಮನಕ್ಕೆ ತರಲು ಪ್ರಯತ್ನ ನಡೆಸುವ ಸಾಧ್ಯತೆ ಇದೆ.
ಸಚಿವ ಸ್ಥಾನಕ್ಕಾಗಿ ಹೆಚ್ಚು ಚರ್ಚೆಯಲ್ಲಿರುವ ಹೆಸರುಗಳಲ್ಲಿ ಆಳಂದ ಶಾಸಕ ಬಿ.ಆರ್. ಪಾಟೀಲ್ ಪ್ರಮುಖರಾಗಿದ್ದಾರೆ. ಹಲವು ದಶಕಗಳ ರಾಜಕೀಯ ಅನುಭವ ಹೊಂದಿರುವ ಅವರು ನಾಲ್ಕು ಬಾರಿ ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಹಾಗೂ ಸಭಾಪತಿಗಳಾಗಿ ಸೇವೆ ಸಲ್ಲಿಸಿದ್ದರೂ ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ. ಕಾಂಗ್ರೆಸ್ ಸೇರಿದ ಬಳಿಕವೂ ಸಚಿವ ಸ್ಥಾನ ದೊರೆಯದಿರುವ ಹಿನ್ನೆಲೆಯಲ್ಲಿ ಈ ಬಾರಿ ಅವರಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯನ್ನು ಬೆಂಬಲಿಗರು ವ್ಯಕ್ತಪಡಿಸುತ್ತಿದ್ದಾರೆ.
ಜೇವರ್ಗಿ ಶಾಸಕ ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್ ಅವರ ಹೆಸರೂ ಪ್ರಮುಖವಾಗಿ ಕೇಳಿಬರುತ್ತಿದೆ. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು ಇದುವರೆಗೆ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯದಿರುವುದರಿಂದ ಈ ಬಾರಿ ಅವಕಾಶ ನೀಡಬೇಕು ಎಂಬ ಒತ್ತಾಯ ಬೆಂಬಲಿಗರಿಂದ ಕೇಳಿಬರುತ್ತಿದೆ.
ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿರುವ ತಿಪ್ಪಣ್ಣಪ್ಪ ಕಮಕನೂರ್ ಅವರೂ ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯಲ್ಲಿ ಪ್ರಮುಖರಾಗಿದ್ದಾರೆ. ಕೋಲಿ ಸಮುದಾಯದ ಪರ ಧ್ವನಿಯಾಗಿರುವ ಅವರು ಸಾಮಾಜಿಕ ಹಾಗೂ ಸಾರ್ವಜನಿಕ ವಿಚಾರಗಳಲ್ಲಿ ಸಕ್ರಿಯರಾಗಿದ್ದು, ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಬೆಂಬಲಿಗರು ಆಗ್ರಹಿಸುತ್ತಿದ್ದಾರೆ.
ಇದರ ಜೊತೆಗೆ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್, ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ, ವಿಧಾನ ಪರಿಷತ್ ಸದಸ್ಯ ಜಗದೇವ್ ಗುತ್ತೇದಾರ್ ಹಾಗೂ ಹಿರಿಯ ಶಾಸಕ ಎಂ.ವೈ. ಪಾಟೀಲ್ ಅವರ ಹೆಸರುಗಳೂ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಆದರೆ, ಸಚಿವ ಸಂಪುಟ ವಿಸ್ತರಣೆ ಕುರಿತು ಕಾಂಗ್ರೆಸ್ ಹೈಕಮಾಂಡ್ ಅಥವಾ ರಾಜ್ಯ ಸರ್ಕಾರದಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಹೀಗಾಗಿ ಈ ಎಲ್ಲ ಹೆಸರುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಊಹಾಪೋಹಗಳಷ್ಟೇ ಆಗಿದ್ದು, ಅಂತಿಮ ನಿರ್ಧಾರ ಪಕ್ಷದ ವರಿಷ್ಠರ ಕೈಯಲ್ಲಿದೆ.



