ಕಲಬುರಗಿಯಲ್ಲಿ ‘ಆರ್ಎಸ್ಎಸ್ ಹಠಾವ್, ದೇಶ್ ಬಚಾವ್’ ಪ್ರತಿಭಟನೆ: ನೋಂದಣಿಯಾಗದಿದ್ದರೆ ನಿಷೇಧಕ್ಕೆ ಆಗ್ರಹ
ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಎಸ್ಪಿಜಿ ಭದ್ರತೆ ನೀಡುವಂತೆ ಕಾಂಗ್ರೆಸ್ ಮುಖಂಡ ಲಚ್ಚಪ್ಪ ಜಮಾದಾರ್ ಒತ್ತಾಯ

ರಾಷ್ಟ್ರಿಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ನೋಂದಣಿ ಮಾಡಿಸಿಕೊಳ್ಳದಿದ್ದರೆ ಸಂಘಟನೆಯನ್ನು ನಿಷೇಧಿಸಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ಕೋಲಿ-ಕಬ್ಬಲಿಗ ಎಸ್ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಚ್ಚಪ್ಪ ಎಸ್. ಜಮಾದಾರ್ ಆಗ್ರಹಿಸಿದರು.
ನಗರದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆಂಬಲ ಸೂಚಿಸಿ ಹಾಗೂ ಆರ್ಎಸ್ಎಸ್ ವಿರುದ್ಧ ಹಮ್ಮಿಕೊಂಡಿದ್ದ ‘ಆರ್ಎಸ್ಎಸ್ ಹಠಾವ್, ದೇಶ್ ಬಚಾವ್’ ಪ್ರತಿಭಟನಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಆರ್ಎಸ್ಎಸ್ ನೋಂದಣಿ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬರೆದ ಪತ್ರಕ್ಕೆ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಸಮರ್ಪಕ ಉತ್ತರ ನೀಡಿಲ್ಲ ಎಂದು ಟೀಕಿಸಿದರು.
ಸಾರ್ವಜನಿಕರಿಂದ ದೇಣಿಗೆ ಅಥವಾ ಆರ್ಥಿಕ ಸಹಾಯ ಪಡೆಯುವ ಎಲ್ಲ ಸಂಘ-ಸಂಸ್ಥೆಗಳು, ಟ್ರಸ್ಟ್ಗಳು ಹಾಗೂ ಸರ್ಕಾರೇತರ ಸಂಸ್ಥೆಗಳು ಕಾನೂನಿನ ಪ್ರಕಾರ ನೋಂದಣಿ ಮತ್ತು ಲೆಕ್ಕಪರಿಶೋಧನೆಗೆ ಒಳಪಡುತ್ತವೆ. ಇದೇ ನಿಯಮಗಳು ಸಾರ್ವಜನಿಕ ಜೀವನದ ಮೇಲೆ ಪ್ರಭಾವ ಬೀರುವ ಎಲ್ಲಾ ಸಂಘಟನೆಗಳಿಗೂ ಸಮಾನವಾಗಿ ಅನ್ವಯವಾಗಬೇಕು ಎಂದು ಅವರು ಒತ್ತಾಯಿಸಿದರು.
ಇತ್ತೀಚಿನ ಕೆಲವು ಧಾರ್ಮಿಕ ಸಂಸ್ಥೆಗಳ ಹಣಕಾಸು ನಿರ್ವಹಣೆ ಕುರಿತ ವರದಿಗಳನ್ನು ಉಲ್ಲೇಖಿಸಿದ ಅವರು, ಸಾರ್ವಜನಿಕ ದೇಣಿಗೆ ಸ್ವೀಕರಿಸುವ ಎಲ್ಲ ಸಂಸ್ಥೆಗಳ ಆದಾಯ-ವೆಚ್ಚ ಹಾಗೂ ಲೆಕ್ಕಪರಿಶೋಧನೆ ಪಾರದರ್ಶಕವಾಗಿರಬೇಕು ಎಂದು ಅಭಿಪ್ರಾಯಪಟ್ಟರು.
ಆರ್ಎಸ್ಎಸ್ ನೋಂದಣಿಯಾಗದಿದ್ದರೆ ಸಂಘಟನೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಈ ಕುರಿತು ರಾಷ್ಟ್ರಪತಿಗಳು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅವರು ಆಗ್ರಹಿಸಿದರು. ಜೊತೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಸಿಂಗೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮತಿನ್ ಪಟೇಲ್ ಹಾಗೂ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಭೀಮಶಾ ಖನ್ನಾ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ ಹಾಕಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ತಮಟೆ ಸದ್ದಿನೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.



