ಶಿಕ್ಷಣ

ಜಿಎನ್‌ಡಿ ಎಂಜಿನಿಯರಿಂಗ್ ಕಾಲೇಜಿನ ಹಳೆ ವಿದ್ಯಾರ್ಥಿಯಿಂದ ‘ವಿಕ್ರಮ್-1’ ಮಿಷನ್‌ಗೆ ಐತಿಹಾಸಿಕ ಕೊಡುಗೆ

ಬೀದರ್‌ನ ಯುವ ಇಂಜಿನಿಯರ್ ನರಸಿಂಗ್ ಮಾಧವ ಶಿಂಧೆ ಸಾಧನೆಗೆ ಕಾಲೇಜು ಕುಟುಂಬದ ಅಭಿನಂದನೆ

ನಗರದ ಗುರು ನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಹಳೆ ವಿದ್ಯಾರ್ಥಿ ನರಸಿಂಗ್ ಮಾಧವ ಶಿಂಧೆ ಅವರು ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದ ಮಹತ್ವಾಕಾಂಕ್ಷೆಯ ‘ವಿಕ್ರಮ್-1’ ಉಡಾವಣಾ ವಾಹನ ಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿ ಕಾಲೇಜು ಹಾಗೂ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.

2019ರ ಬ್ಯಾಚ್‌ನ ವಿದ್ಯಾರ್ಥಿಯಾಗಿದ್ದ ನರಸಿಂಗ್ ಮಾಧವ ಶಿಂಧೆ ಅವರು ಸ್ಕೈರೂಟ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ‘ವಿಕ್ರಮ್-1’ ಉಡಾವಣಾ ವಾಹನ (ಮಿಷನ್ ಅಗಮನ) ಯೋಜನೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. 2026ರ ಜುಲೈ 18ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ಉಡಾವಣೆ ಯಶಸ್ವಿಯಾಗಿ ನೆರವೇರಿದ್ದು, ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದೆ.

ನರಸಿಂಗ್ ಮಾಧವ ಶಿಂಧೆ ಅವರು 2016ರಿಂದ 2019ರವರೆಗೆ ಗುರು ನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ್ದರು. ಬಳಿಕ 2020ರಿಂದ 2023ರವರೆಗೆ ಡಿಆರ್‌ಡಿಓದಲ್ಲಿ ಗುತಿಗೆ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿ, 2023ರಲ್ಲಿ ಸ್ಕೈರೂಟ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಕ್ಯಾಡ್ ಮತ್ತು ಕಾನ್ಫಿಗರೇಷನ್ ವಿಭಾಗದಲ್ಲಿ ರಚನಾತ್ಮಕ ಇಂಜಿನಿಯರ್ ಆಗಿ ಸೇರ್ಪಡೆಯಾದರು.

‘ವಿಕ್ರಮ್-1’ ಮಿಷನ್ ತಂಡದ ಸದಸ್ಯರಾಗಿ ಅವರು ಉಡಾವಣಾ ವಾಹನದ ನಾಲ್ಕನೇ ಹಂತದ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ರಚನಾತ್ಮಕ ವಿನ್ಯಾಸ, ಕ್ಯಾಡ್ ಅಭಿವೃದ್ಧಿ, ಕಾನ್ಫಿಗರೇಷನ್ ನಿರ್ವಹಣೆ, ಇಂಜಿನಿಯರಿಂಗ್ ದಾಖಲೆಗಳ ಸಿದ್ಧತೆ, ವಿನ್ಯಾಸ ಮೌಲ್ಯಮಾಪನ, ಉತ್ಪಾದನೆ, ಜೋಡಣೆ, ಏಕೀಕರಣ ಹಾಗೂ ಪರೀಕ್ಷಾ ತಂಡಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ಮಿಷನ್ ಯಶಸ್ಸಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ.

ತಮ್ಮ ಸಾಧನೆಯ ಕುರಿತು ಮಾತನಾಡಿದ ನರಸಿಂಗ್ ಮಾಧವ ಶಿಂಧೆ, “ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದ ಮಹತ್ವದ ಯೋಜನೆಯಾದ ‘ವಿಕ್ರಮ್-1’ ಮಿಷನ್‌ನ ಭಾಗವಾಗಿರುವುದು ನನ್ನ ಇಂಜಿನಿಯರಿಂಗ್ ಜೀವನದ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ಈ ಸಾಧನೆಗೆ ಭದ್ರ ಅಡಿಪಾಯ ಹಾಕಿದ ಗುರು ನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜಿಗೆ ನಾನು ಸದಾ ಕೃತಜ್ಞನಾಗಿರುತ್ತೇನೆ” ಎಂದು ಹೇಳಿದರು.

ಈ ಅಪೂರ್ವ ಸಾಧನೆಗಾಗಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು, ಬೋಧಕ ವೃಂದ, ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳು ನರಸಿಂಗ್ ಮಾಧವ ಶಿಂಧೆ ಅವರನ್ನು ಅಭಿನಂದಿಸಿದ್ದಾರೆ. ಅವರ ಸಾಧನೆಯು ಸಂಸ್ಥೆಯ ಗುಣಮಟ್ಟದ ತಾಂತ್ರಿಕ ಶಿಕ್ಷಣಕ್ಕೆ ಸಾಕ್ಷಿಯಾಗಿದ್ದು, ಮುಂದಿನ ತಲೆಮಾರಿನ ಇಂಜಿನಿಯರ್‌ಗಳಿಗೆ ಪ್ರೇರಣೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಶ್ರೀ ನಾನಕ್ ಝೀರಾ ಸಾಹೇಬ್ ಫೌಂಡೇಶನ್ ಅಧ್ಯಕ್ಷ ಡಾ. ಎಸ್. ಬಲಬೀಸಿಂಗ್, ಉಪಾಧ್ಯಕ್ಷೆ ಡಾ. ರೇಷ್ಮಾ ಕೌರ್, ಪ್ರಾಂಶುಪಾಲೆ ಡಾ. ವೀಣಾ ಎಸ್. ಸೊರಗನ್ವಿ ಸೇರಿದಂತೆ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನರಸಿಂಗ್ ಮಾಧವ ಶಿಂಧೆ ಅವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿ, ಮುಂದಿನ ವೃತ್ತಿಜೀವನದಲ್ಲೂ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡುವಂತೆ ಶುಭ ಹಾರೈಸಿದರು.

Related Articles

Leave a Reply

Your email address will not be published. Required fields are marked *

Back to top button