ಭೀಮಾ ನದಿಗೆ ಆಲಮಟ್ಟಿ ಜಲಾಶಯದಿಂದ 2 ಟಿಎಂಸಿ ನೀರು ಹರಿಸಲು ಶಾಸಕ ಎಂ.ವೈ. ಪಾಟೀಲ ಆಗ್ರಹ
ಕುಡಿಯುವ ನೀರಿನ ತೀವ್ರ ಸಂಕಷ್ಟ ನಿವಾರಣೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಆಯುಕ್ತರಿಗೆ ಪತ್ರ

ಮತಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ಜನರು ಹಾಗೂ ಜಾನುವಾರುಗಳು ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಆಲಮಟ್ಟಿ ಜಲಾಶಯದಿಂದ ಭೀಮಾ ನದಿಗೆ ತಕ್ಷಣ 2 ಟಿಎಂಸಿ ನೀರು ಹರಿಸಬೇಕು ಎಂದು ಅಫಜಲಪುರ ಶಾಸಕ ಎಂ.ವೈ. ಪಾಟೀಲ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿರುವ ಅವರು, ಮಳೆ ನಿರೀಕ್ಷೆಯಲ್ಲಿರುವ ರೈತರು ಮಳೆಯ ಅಭಾವದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಕೊರತೆ ಹೆಚ್ಚಾಗಿದ್ದು, ಬೋರ್‌ವೆಲ್‌ಗಳು ಒಣಗಿವೆ, ಬಾವಿಗಳಲ್ಲಿಯೂ ನೀರಿನ ಮಟ್ಟ ಕುಸಿದಿದೆ. ಭೀಮಾ ನದಿಯಲ್ಲೂ ನೀರಿನ ಹರಿವು ಇಲ್ಲದ ಕಾರಣ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರದಿಂದ ಬರಬೇಕಾದ ನೀರಿನ ಹರಿವು ಸಮರ್ಪಕವಾಗಿ ದೊರೆಯದಿರುವುದರಿಂದ ಜಿಲ್ಲೆಯ ಹಲವು ಭಾಗಗಳಲ್ಲಿ ನೀರಿನ ಅಭಾವ ಉಂಟಾಗಿದೆ. ಅಫಜಲಪುರ ಕ್ಷೇತ್ರದಲ್ಲಿ ಸುಮಾರು 150 ಕಿಲೋಮೀಟರ್ ವ್ಯಾಪ್ತಿಯಲ್ಲಿ ಭೀಮಾ ನದಿ ಹರಿಯುತ್ತಿದ್ದು, ಈ ನದಿಯನ್ನು ಅವಲಂಬಿಸಿ ಅನೇಕ ಗ್ರಾಮಗಳ ಕುಡಿಯುವ ನೀರಿನ ಯೋಜನೆಗಳು ಕಾರ್ಯನಿರ್ವಹಿಸುತ್ತಿವೆ. ನದಿಯಲ್ಲಿ ನೀರಿನ ಕೊರತೆಯಿಂದ ಈ ಯೋಜನೆಗಳಿಗೂ ತೊಂದರೆ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ಆಲಮಟ್ಟಿ ಜಲಾಶಯದಲ್ಲಿ ನೀರಿನ ಲಭ್ಯತೆ ಇರುವುದರಿಂದ ಕೃಷ್ಣಾ ಯೋಜನೆಯ ಕಾಲುವೆಗಳ ಮೂಲಕ ಭೀಮಾ ನದಿಗೆ ನೀರು ಹರಿಸಿದರೆ ಜನರು ಹಾಗೂ ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದು ಶಾಸಕರು ಅಭಿಪ್ರಾಯಪಟ್ಟಿದ್ದಾರೆ.
ಇದಲ್ಲದೆ, ಸಿಂದಗಿ ತಾಲ್ಲೂಕಿನ ಬಗಲೂರು ವಿತರಣಾ ವ್ಯವಸ್ಥೆ ಸೇರಿದಂತೆ ವಿವಿಧ ಜಲಾಶಯಗಳಿಗೆ ನೀರು ಹರಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಜೊತೆಗೆ ಕೃಷ್ಣಾ ನದಿಯಿಂದ ಕೂಡಲೇ 2 ಟಿಎಂಸಿ ನೀರನ್ನು ಭೀಮಾ ನದಿಗೆ ಬಿಡುಗಡೆ ಮಾಡಿ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಎಂ.ವೈ. ಪಾಟೀಲ ಒತ್ತಾಯಿಸಿದ್ದಾರೆ.



